ಕಾರವಾರ : ಪತ್ನಿ ಹಾಗೂ ಮಗಳನ್ನು ಮರ್ಡರ್ ಆಗಿದೆ. ಬೇಗ ಬನ್ನಿ . ಕೊಲೆಗಡುಕರನ್ನು ಹಿಡಿಯಿರಿ ಎಂದು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬನ ಮಾತು ನಂಬಿ , ತಡಬಡಿಸಿ ಸ್ಥಳಕ್ಕೆ ಹೋದ ಪೊಲೀಸರು , ಶವಗಳಿಗಾಗಿ ಹಿಲ್ಲೂರು ಗ್ರಾಮದ ಬಿಲ್ಲನಬೈಲ ಎಂಬಲ್ಲಿ ಹುಡುಕಾಟ ನಡೆಸಿದ ಕುತೂಹಲಕಾರಿ ಘಟನೆ ನಡೆದಿದೆ.
ಶುಕ್ರವಾರ ಸಂಜೆ 5-30 ರ ಸುಮಾರಿಗೆ ಪೊಲೀಸ್ ಸಹಾಯ ವಾಣಿಗೆ ಕರೆ ಮಾಡಿದ ಹಿಲ್ಲೂರಿನ ಬಿಲ್ಲನಬೈಲನ ಮಂಜುನಾಥ ಬೊಮ್ಮಯ್ಯ ನಾಯಕ್ ಎಂಬಾತ “ನನ್ನ ಪತ್ನಿ ಹಾಗೂ ಮಗಳನ್ನು ಯಾರೋ ಭೀಕರವಾಗಿ ಕೊಲೆ ಮಾಡಿ ತೆರಳಿದ್ದಾರೆ. ನನಗೆ ಹೆದರಿಕೆ ಆಗತಾ ಇದೆ. ಕೂಡಲೆ ಸ್ಥಳಕ್ಕೆ ಬರುವಂತೆ ಪೋನ್ ಕರೆ ಮಾಡಿದ .
ಕರೆಯನ್ನು ಗಂಭೀರವಾಗಿ ಪರಿಗಣಿಸಿದ ಕಾರವಾರದ ವೈಯರಲೆಸ್ ಮೂಲಕ (ಹೈ ಅಲರ್ಟ್ ಕ್ರೈಂ ವಿಭಾಗದವರು ಹಿಲ್ಲೂರಿನಲ್ಲಿ ಕೊಲೆ ನಡೆದಿದೆ. ಕೂಡಲೆ ಸ್ಥಳಕ್ಕೆ ತೆರಳಿ ತನಿಖೆ ನಡೆಸುವಂತೆ ಆದೇಶ ಅಂಕೋಲಾ ಠಾಣೆಗೆ ಬಂದಿತ್ತು. ಕೂಡಲೆ ಕರೆ ಸ್ವೀಕರಿಸಿದ ಪಿಎಸೈ ಉದ್ಧಪ್ಪ ಧರೆಪ್ಪನವರ್, ಎಎಸೈ ಲಲಿತಾ ರಜಪೂತ್ ಹಾಗೂ ಸಿಬ್ಬಂದಿ ಪ್ರವೀಣ ಪೂಜಾರ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ, ಜೀಪನ್ನೇರಿ ತಾಲೂಕು ಕೇಂದ್ರದಿಂದ 37 ಕೀಮೀ ಅಂತರವಿರುವ ಹಿಲ್ಲೂರಿಗೆ ತೆರಳಿದ್ದರು.
ಕರೆ ಬಂದ 25 ನಿಮಿಷದಲ್ಲಿ ಪೊಲೀಸರು ಹಿಲ್ಲೂರು ಗ್ರಾಮದ ಸ್ಥಳಕ್ಕೆ ತೆರಳಿ ಮಂಜುನಾಥ ಬೊಮ್ಮಯ್ಯ ನಾಯಕ ಅವರ ಮನೆಯ ಸುತ್ತಮುತ್ತ ಶವದ ಹುಡುಕಾಟ ನಡೆಸಿದ್ದರು. 15 ನಿಮಿಷ ಕಳೆದರೂ ಶವ ಪತ್ತೆ ಆಗದೆ ಹೋದಾಗ , ಅಲ್ಲಿಯೇ ಮುಗುಳನಗುತ್ತಲೆ ನಿಂತಿದ್ದ ಕರೆ ಮಾಡಿದ್ದ ಮಂಜುನಾಥ ನಾಯಕ ” ನಿಮಗೆ ನನ್ನ ಪತ್ನಿ ಹಾಗೂ ಮಗಳ ಶವ ಸಿಕ್ಕಿತೆ ಎಂದು ಪೊಲೀಸರಲ್ಲಿ ಪ್ರಶ್ನಿಸಿದ. ಅವರು ಸಿಗಲ್ಲಾ ಬಿಡಿ, ಅವರು ಮುಂದೆ ಕೊಲೆ ಆದರೂ ಆಗಬಹುದು. ನಾನೆ ಮುನ್ನೆಚ್ಚರಿಕೆಯಾಗಿ ಕರೆ ಮಾಡಿದ್ದೆ. ಅವರ ಮನೆಯಲ್ಲಿ ಕಾಣಾತಾ ಇಲ್ಲಾ. ಹಾಗಾಗಿ ಸುಳ್ಳು ಕರೆ ಮಾಡಿದ್ದೆ” ಎಂದು ಪೊಲೀಸರ ಮುಂದೆ ಹಲ್ಲು ಕಿರಿದು ನಿಂತ.
ಈತನ ಮಾತು ಕೇಳಿ ” ಕುಪಿತರಾದ ಪೊಲೀಸರು, ಈತನಿಗೆ ನಾಲ್ಕು ಏಟು ಹಾಕಿ, ಲಾಠಿ ರುಚಿ ತೋರಿಸಿದ್ದಾರೆ.
ನೂರಾರು ಜನ ಸೇರಿದ್ದರು:
ಹಿಲ್ಲೂರು ಗ್ರಾಮದಲ್ಲಿ ಕೊಲೆಯಾಗಿದೆ ಎಂದು ವಿಷಯ ತಿಳಿದ ಕೂಡಲೆ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಆದರೆ ಈತನ ಸಮೀಪದ ಬಂಧುಗಳು ಮಾತನಾಡಿ ” ಮಂಜುನಾಥ ಬೊಮ್ಮಯ್ಯ ಮಾನಸಿಕ ಅಸ್ವಸ್ಥ. ಕಳೆದೊಂದು ವರ್ಷದಿಂದ ಹೀಗೆ ಮಾಡುತ್ತಿದ್ದಾನೆ. ಇತನ ಕಿರುಕುಳದಿಂದ ಬೇಸೆತ್ತು ಪತ್ನಿ– ಮಕ್ಕಳು ಬೇರೆಯವರ ಮನೆಯಲ್ಲಿ ವಾಸ ಮಾಡ್ತಾ ಇದ್ದಾರೆ ” ಎಂದು ಪೊಲೀಸರಿಗೆ ವಿವರಿಸಿದರು. ಈತ ಮಾನಸಿಕ ಅಸ್ವಸ್ಥ ಎಂದು ತಿಳಿದ ಪೊಲೀಸರು ನಿಟ್ಟಿಸಿರು ಬಿಟ್ಟು ಮತ್ತೆ ಅಂಕೋಲಾ ಠಾಣೆಯತ್ತ ಮುಖ ಮಾಡಿದ್ದರು.
ಬೆರಳಚ್ಚು ತಜ್ಞರ ತಂಡ ಅಂಕೋಲಾಕ್ಕೆ ಆಗಮಿಸುತ್ತಿದ್ದರು…:
ಹಿಲ್ಲೂರಲ್ಲಿ ಡಬಲ್ ಮರ್ಡರ್ ಪ್ರಕರಣವಾಗಿದೆ ಎಂದು ಪೊಲೀಸರು ತಲೆ ಬಿಸಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಕಾರವಾರದಿಂದ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಅಂಕೋಲಾಕ್ಕೆ ಆಗಮಿಸುತ್ತಿದ್ದರು ಎಂದು ತಿಳಿದು ಬಂದಿದೆ. ಮಾರ್ಗ ಮಧ್ಯೆ ಇರುವಾಗ ಇದೊಂದು ಸುಳ್ಳು ಮಾಹಿತಿ. ಎಂದು ಮರು ಮಾಹಿತಿ ಅಂಕೋಲಾ ಪೊಲೀಸರಿಂದಲೇ ಬಂದ ಮೇಲೆ, ಬಿಣಗಾದಿಂದ ಶ್ವಾನದಳ, ಬೆರಳಚ್ಚು ತಜ್ಞರ ತಂಡ ವಾಪಸ್ ತೆರಳಿದರು.
….