ತುಮಕೂರು: ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿ ಮಹಿಳೆಯರು, ಯುವಕ-ಯುವತಿಯರು BJP-RSS ಸುಳ್ಳೋತ್ಪಾದಕರ ಮುಖಕ್ಕೆ ಉತ್ತರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ತುಮಕೂರು ಜಿಲ್ಲೆಯ 30,125 ಫಲಾನುಭವಿಗಳಿಗೆ ಹಲವು ಇಲಾಖೆಗಳ ಸವಲತ್ತು ಮತ್ತು ಸಲಕರಣೆಗಳನ್ನು ವಿತರಿಸಿ, ಒಂದೇ ದಿನ 697.27 ಕೋಟಿ ರೂ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳು ಜಾರಿಯಾಗಲ್ಲ, ಸರ್ಕಾರದಲ್ಲಿ ಹಣ ಇಲ್ಲ ಎಂದು ಸುಳ್ಳೋತ್ಪಾದಿಕರಿಗೆ ಈ ಕಾರ್ಯಕ್ರಮವೇ ಒಂದು ಉತ್ತರ. ಐದಕ್ಕೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಈ ಯೋಜನೆಗಳ ಫಲಾನುಭವಿಗಳು ಸುಳ್ಳೋತ್ಪಾದಕರ ಮುಖಕ್ಕೆ ಸರಿಯಾಗಿ ಉತ್ತರ ನೀಡಬೇಕು ಎಂದರು.
ರಾಜ್ಯದಲ್ಲಿ ಭೀಕರ ಬರಗಾಲ ಬಂದಿದ್ದರೂ ಕೇಂದ್ರ ಸರ್ಕಾರ ಇದುವರೆಗೂ ರಾಜ್ಯದ ಪಾಲಿನ ಒಂದೇ ಒಂದು ರೂಪಾಯಿ ಬರ ಪರಿಹಾರವನ್ನೂ ನೀಡಿಲ್ಲ. ಆದರೆ ರಾಜ್ಯ ಸರ್ಕಾರ 29,28,910 ರೈತರ ಖಾತೆಗೆ ಬರ ಪರಿಹಾರದ ಮೊದಲ ಕಂತನ್ನು ಜಮೆ ಮಾಡಿದೆ ಎಂದು ದಾಖಲೆಗಳ ಸಮೇತ ವಿವರಿಸಿದರು.