ನಕಲಿ ಮದುವೆ ಮಾಡಿಸಿ ಒಡವೆ-ಹಣ ದೋಚುತ್ತಿದ್ದ ತಂಡದ ಬಂಧನ : ಮೂರು ವರ್ಷದಲ್ಲಿ ನಾಲ್ಕು ನಕಲಿ ಮದುವೆ!

ತುಮಕೂರು: ನಕಲಿ ಮದುವೆ ಮಾಡಿ ಒಡವೆ ಹಣ ದೋಚುತ್ತಿದ್ದ ನಾಲ್ವರ ಖತರ್ನಾಕ್ ತಂಡವನ್ನು ಗುಬ್ಬಿ ಪೊಲೀಸರು ಬಂಧಿಸಿದ್ದಾರೆ.

ಮದುವೆ ಹೆಸರಲ್ಲಿ ಮದುವೆಯಾಗದವರನ್ನು ಗುರಿಯಾಗಿಸುತ್ತಿದ್ದ ಮಧ್ಯವರ್ತಿಗಳ ತಂಡ ಗ್ರಾಮೀಣ ಭಾಗದಲ್ಲಿ ಮದುವೆ ಮಾಡಲು ಹಾತೊರೆಯುವ ಕುಟುಂಬವನ್ನು ನಂಬಿಸಿ ಸಂಪ್ರದಾಯದಂತೆ ಮದುವೆ ಮಾಡಿಕೊಂಡು ಹಣ-ಚಿನ್ನದೊಂದಿಗೆ ವ್ಯವಸ್ಥಿತವಾಗಿ ಪರಾರಿಯಾಗುತ್ತಿತ್ತು. ತಂಡವನ್ನು ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಬಂಧಿಸಿ ಕರೆ ತಂದು ಜೈಲಿಗಟ್ಟಿದ್ದಾರೆ.

ಲಕ್ಷ್ಮೀ ಬಾಳ ಸಾಬ್ ಜನಕರ್ ಅಲಿಯಾಸ್ ಕೋಮಲ, ಸಿದ್ದಪ್ಪ , ಲಕ್ಷ್ಮೀಬಾಯಿ, ಲಕ್ಷ್ಮಿ ಬಂಧಿತರು. ಲಕ್ಷ್ಮೀ ಬಾಳ ಸಾಬ್ ಜನಕರ್ ಅಲಿಯಾಸ್ ಕೋಮಲ ಮಧುಮಗಳು.
ಚಿಕ್ಕಪ್ಪ ಪಾತ್ರಧಾರಿ ಸಿದ್ದಪ್ಪ,
ಚಿಕ್ಕಮ್ಮ ಪಾತ್ರ ಧಾರಿ ಲಕ್ಷ್ಮೀಬಾಯಿ ಹಾಗೂ
ಬ್ರೋಕರ್‌ ಲಕ್ಷ್ಮಿ ಬಂಧಿತರು. ನಕಲಿ ವಧುವಿಗೆ ಇಬ್ಬರು ಬೆಳೆದು ನಿಂತ ಮಕ್ಕಳಿದ್ದಾರೆ ಎಂಬುದೂ ಆಘಾತಕಾರಿ!

ಗುಬ್ಬಿ ಸೇರಿದಂತೆ ರಾಜ್ಯದ ಹಲವು ಕಡೆ ಮುಗ್ಧ ಕುಟುಂಬವನ್ನು ಯಾಮಾರಿಸಿದ್ದ ತಂಡ ಮೂರು ವರ್ಷದಲ್ಲಿ ನಾಲ್ಕು ನಕಲಿ ಮದುವೆ ನಡೆಸಿ ಹಣ, ಚಿನ್ನಾಭರಣ ದೋಚಿ ನಾಪತ್ತೆಯಾಗಿದ್ದ ಘಟನೆ ನಡೆದಿತ್ತು.ಈ ಪೈಕಿ ಗುಬ್ಬಿ ತಾಲ್ಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ಪಾಲಾಕ್ಷ್ಯ ಎಂಬವರ ಮಗನಿಗೆ ನಕಲಿ ವಧು ಸೃಷ್ಟಿಸಿ ಎಲ್ಲಾ ಸಂಪ್ರದಾಯದಂತೆ ಮದುವೆ ನಡೆದಿಸಿದ್ದಾರೆ. ದಯಾನಂದಮೂರ್ತಿ(38) ಅಸಲಿ ಗಂಡಿಗೆ ಹೆಣ್ಣು ಹುಡುಕುವ ತವಕದಲ್ಲಿ ಈ ಮೋಸದ ಜಾಲಕ್ಕೆ ಪಾಲಕ್ಷ್ಯ ಕುಟುಂಬ ಸಿಲುಕಿದೆ.

ಕುಷ್ಟಗಿ ಮೂಲದ ಬಸವರಾಜು ಮೂಲಕ ಬ್ರೋಕರ್ ಲಕ್ಷ್ಮಿ ಎಂಬಾಕೆಯ ಪರಿಚಯ ಮಾಡಿಕೊಂಡ ಪಾಲಾಕ್ಷ್ಯ ಅವರ ಮದುವೆ ಕನಸಿಗೆ ಮತ್ತಷ್ಟು ಆಸೆ ಹುಟ್ಟಿಸಿ ಹುಬ್ಬಳ್ಳಿಯಲ್ಲಿ ಒಬ್ಬ ಒಳ್ಳೆ ಹುಡುಗಿ ಇದ್ದಾಳೆ. ಆಕೆಗೆ ತಂದೆ ತಾಯಿ ಇಲ್ಲ ನೀವೆ ಮದುವೆ ಮಾಡಿಕೊಳ್ಳಬೇಕೆಂದು ಸುಳ್ಳು ಹೇಳಿ ಕೋಮಲ ಎಂಬ ಹೆಸರಿನಲ್ಲಿ ಯುವತಿಯ ಪೋಟೋ ತೋರಿಸಿದ್ದರು.

ಗಂಡಿನ ಮನೆ ನೋಡಲು ತಾಲ್ಲೂಕಿನ ಅತ್ತಿಕಟ್ಟೆ ಗ್ರಾಮಕ್ಕೆ ಬಂದಿದ್ದ ನಕಲಿ ವಧು ಜೊತೆಗೆ ನಕಲಿ ಚಿಕ್ಕಮ್ಮ ಚಿಕ್ಕಪ್ಪ ಕಳೆದ ವರ್ಷದ ನವೆಂಬರ್‌ ತಿಂಗಳಲ್ಲಿ ಮದುವೆ ಗಂಡಿನ ಮನೆಗೆ ಬಂದು ಅಂದೇ ಮದುವೆ ಮಾತುಕತೆ ನಡೆಸಿ ಮರುದಿನವೇ ಅತ್ತಿಕಟ್ಟೆ ಗ್ರಾಮದಲ್ಲೇ ದೇವಸ್ಥಾನದ ಬಳಿ ಮದುವೆ ಮಾಡಿ ಮುಗಿಸಿ ತಮ್ಮ ಮೋಸದ ಜಾಲ ಯಶಸ್ವಿಗೊಳಿಸಿದರು.

ಮಧುಮಗಳಿಗೆ ಚಿನ್ನದ ಸರ, ತಾಳಿ, ಕಿವಿಗೆ ಓಲೆ ಒಟ್ಟು 25 ಗ್ರಾಂ ಚಿನ್ನಾಭರಣ ನೀಡಿದ್ದ ಪಾಲಾಕ್ಷ್ಯ ಇಡೀ ನಕಲಿ ಮದುವೆಯ ಸೂತ್ರಧಾರಿ ಬ್ರೋಕರ್‌ ಲಕ್ಷ್ಮಿಗೆ 1.5 ಲಕ್ಷ ಹಣ ನೀಡಿದ್ದರು. ಹೆಣ್ಣಿನ ಕಡೆಯವರು ಅಂತ 8 ಜನರನ್ನ ಕರೆ ತಂದಿದ್ದ ಬ್ರೋಕರ್‌ ಲಕ್ಷ್ಮಿ ಮದುವೆ ಮುಗಿದ ಎರಡು ದಿನದ ನಂತರ ಸಂಪ್ರದಾಯದ ಹೆಸರಿನಲ್ಲಿ ಚಿನ್ನಾಭರಣ ಸಹಿತ ಯುವತಿಯೊಬ್ಬಳನ್ನೇ ವಾಪಸ್‌ ಕರೆದುಕೊಂಡು ಹೊರಟರು.

ಒಂದು ವಾರ ಕಳೆದರೂ ವಾಪಸ್‌ ಬರದ ಮಧುಮಗಳ ಬಗ್ಗೆ ಆತಂಕಗೊಂಡ ಪಾಲಾಕ್ಷ್ಯ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ ಸತ್ಯ ಬಯಲಾಗಿದೆ. ವಾಪಸ್‌ ಗುಬ್ಬಿಗೆ ಬಂದ ಪಾಲಕ್ಷ್ಯ ಮದುವೆ ಮಾಡಿಸಿದ ತಂಡದ ವಿರುದ್ಧ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡ ಗುಬ್ಬಿ ಪೊಲೀಸರು ನಿರಂತರ ತನಿಖೆ ನಡೆಸಿ ಒಂದು ವರ್ಷದಿಂದ ತಲೆ ಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಮಹಾರಾಷ್ಟ್ರ, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಬಂದಿಸಿದರು.

ಮದುವೆ ಮಾಡಿ ವಂಚನೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ ತಂಡ ನಕಲಿ ಅಡ್ರೆಸ್‌ ನಲ್ಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿಕೊಳ್ಳುತ್ತಿದ್ದರು.
ಆಧಾರ್ ಕಾರ್ಡ್ ತೋರಿಸಿ ಗಂಡಿನ‌ ಮನೆಯವರನ್ನ ನಂಬಿಸುತ್ತಿದ್ದರು. ನಾಲ್ವರಿಗೂ ಹೆಚ್ಚು ಜನರಿಗೆ ಮದುವೆ ಹೆಸರಿನಲ್ಲಿ ಮೋಸ ಮಾಡಿದ್ದರು.

Latest Indian news

Popular Stories