ತುಮಕೂರು: ಕಲುಷಿತ ನೀರು ಸೇವಿಸಿ ಆರು ಮಂದಿ ದುರ್ಮರಣ; ಪರಿಸ್ಥಿತಿ ಉದ್ವಿಗ್ನ, ಪರಮೇಶ್ವರ್ ಭೇಟಿ- ಪರಿಶೀಲನೆ

ತುಮಕೂರು: ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಕಲುಷಿತ ನೀರು ಸೇವಿಸಿ ಅಂಬೆಗಾಲಿಡುವ ಮಗು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದು, ನೂರಾರು ನಿವಾಸಿಗಳು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕದಾಸಪ್ಪ (76) ಮತ್ತು ಪೆದ್ದಣ್ಣ (74) ಎಂಬ ಇಬ್ಬರು ವಯೋವೃದ್ಧರು ಇಲ್ಲಿನ ಜಿಲ್ಲಾ ಜನರಲ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಐಸಿಯುಗಳಲ್ಲಿ ಮೂವರು ವೃದ್ಧರು, ಮೂವರು ಮಕ್ಕಳು ಸೇರಿದಂತೆ ಹತ್ತು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ಗುರುವಾರ ಇಲ್ಲಿನ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮತ್ತು ಜಿಲ್ಲಾ ಸರ್ಜನ್ ಡಾ.ಅಸ್ಗರ್ ಬೇಗ್ ಸಚಿವರ ಜೊತೆಗಿದ್ದರು. ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳಿಗೆ ಶುದ್ದ ಕುಡಿಯುವ ನೀರು ಪೂರೈಕೆಯಾಗುವಂತೆ ಕ್ರಮಕೈಗೊಳ್ಳಲು ಸಚಿವರು ಡಿಸಿಗೆ ಸೂಚಿಸಿದರು. ಈ ಸಂಬಂಧ ಶಾಸಕ ಹಾಗೂ ಸಹಕಾರ ಸಚಿವ ಕೆ ಎನ್ ರಾಜಣ್ಣ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದರು.

ತಾಲೂಕಿನಾದ್ಯಂತ ಹಲವಾರು ವರ್ಷಗಳಿಂದ ಸ್ವಚ್ಛತೆ ಕಾಣದ ಓವರ್‌ಹೆಡ್‌ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವಂತೆ ಎಚ್ಚರಿಕೆ ನೀಡಿದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು. ಚಿನ್ನೇನಹಳ್ಳಿ ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದರು.

ಕರ್ತವ್ಯ ಲೋಪದ ಆರೋಪದ ಮೇಲೆ ಪ್ರಭಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಬಿ ವಿ ಮುನಿರಾಜು ಮತ್ತು ವಾಟರ್‌ಮ್ಯಾನ್ ಎಸ್ ನಾಗರಾಜು ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಹಲವು ವರ್ಷಗಳಿಂದ ಸ್ವಚ್ಛತೆ ಇಲ್ಲದ ಕಾರಣ ಕಲುಷಿತಗೊಂಡಿದ್ದ ಓವರ್‌ಹೆಡ್‌ ಟ್ಯಾಂಕ್‌ನಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿರುವ ಸ್ಯಾಂಪಲ್‌ಗಳಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ತಿಳಿಸಿದ್ದಾರೆ.

ಓವರ್‌ಹೆಡ್ ಟ್ಯಾಂಕ್‌ನ ನೀರನ್ನು ಬಳಸದಂತೆ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದರು. ಜೂನ್.9 ರಂದು ಆರಂಭವಾದ ಲಕ್ಷ್ಮೀದೇವಿ ಮತ್ತು ಕೆಂಪಣ್ಣದೇವರ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ತೊಂದರೆಯುಂಟಾಯಿತು.

ಕೆಲವು ಚಿಕ್ಕ ಮಕ್ಕಳು ಸೇರಿದಂತೆ ಐವತ್ತಕ್ಕೂ ಹೆಚ್ಚು ಜನರು ಜೂನ್.10 ರಂದು ವಾಂತಿ ಬೇಧಿ ದೂರು ನೀಡಲು ಪ್ರಾರಂಭಿಸಿದರು ಮತ್ತು ವಯಸ್ಸಾದ ಮಹಿಳೆಯರಾದ ಹನುಮಕ್ಕ (85) ಸಾವನ್ನಪ್ಪಿದರು. ಜೂನ್.11 ರಂದು ನಾಗಮ್ಮ(89), ನಾಗಪ್ಪ(85) ಮೃತಪಟ್ಟಿದ್ದರು.

ಮಂಜುನಾಥ್ ಮತ್ತು ಜಯಲಕ್ಷ್ಮಿ ದಂಪತಿಯ ಪುತ್ರಿ ಮೂರು ವರ್ಷದ ಮೀನಾಕ್ಷಿ ಮಧುಗಿರಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಸಂತ್ರಸ್ತರನ್ನು ತಾಲೂಕು ಕೇಂದ್ರ ಮಧುಗಿರಿ ಆಸ್ಪತ್ರೆಗಳಿಗೆ ರವಾನಿಸಿ ಅಲ್ಲಿಂದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗಿಗಳು ಬಹು ಅಂಗಾಂಗ ವೈಫಲ್ಯದಿಂದ ವೃದ್ಧರು ಸಾವನ್ನಪ್ಪಿದ್ದಾರೆ ಎಂದು ನಿವಾಸಿ ವೈದ್ಯಾಧಿಕಾರಿ ಡಾ.ಚೇತನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದರು.

Latest Indian news

Popular Stories