ಅಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳ ಸಮತೋಲಿತ ಬಜೆಟ್ ಇದಾಗಿದ್ದು, ಮಧ್ಯಮ ವರ್ಗದ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ತನ್ನ ಆಯವ್ಯಯ ರೂಪಿಸಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ ಸುನಿಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಮೃತ ಕಾಲದಲ್ಲಿ ಏಳು ಆದ್ಯತಾ ವಲಯವನ್ನು ” ಸಪ್ತರ್ಷಿ” ಎಂದು ಪರಿಗಣಿಸಿ ಕೇಂದ್ರ ಬಜೆಟ್ ನಲ್ಲಿ ಯೋಜನೆ ರೂಪಿಸಲಾಗಿದೆ. ಹಸಿರು ಕ್ರಾಂತಿಗಾಗಿ ಪಿಎಂ ಪ್ರಣಾಮ್ ಯೋಜನೆ ರೂಪಿಸಲಾಗಿದ್ದು, ಮತ್ಸ್ಯ ಸಂಪದ ಯೋಜನೆಯಲ್ಲಿ ೬೦೦೦ ಕೋಟಿ ರೂ. ಹೂಡಿಕೆ ಪ್ರಸ್ತಾಪಿಸಿರುವುದು ರಾಷ್ಟ್ರದ ಕರಾವಳಿ ಭಾಗದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಭದ್ರ ಮೇಲ್ದಂಡೆ ಯೋಜನೆಗಾಗಿ ಬಜೆಟ್ ನಲ್ಲಿ ೫೩೦೦ ಕೋಟಿ ರೂ. ನಿಗದಿ ಮಾಡಿರುವುದು ಅತ್ಯಂತ ಸ್ವಾಗತಾರ್ಹ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಸಿರು ಇಂಧನ ಕ್ಷೇತ್ರವನ್ನು ಆದ್ಯತಾ ವಲಯವಾಗಿ ಗುರುತಿಸಲಾಗಿದ್ದು, ೨೦೩೦ ರ ವೇಳೆಗೆ ೫ ಎಂಎಂಟಿ ಹಸಿರು ಹೈಡ್ರೋಜನ್ ಉತ್ಪಾದನಾ ಗುರಿ ನಿಗದಿ ಮಾಡಲಾಗಿದ್ದು, ೩೫೦೦೦ ಕೋಟಿ ರೂ. ಹೂಡಿಕೆಗೆ ನಿರ್ಧರಿಸಿರುವುದು ಸ್ವಾಗತಾರ್ಹ. ಇದು ರಾಜ್ಯಗಳ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಬಂಡವಾಳ ಹೂಡಿಕೆ ಮಿತಿಯನ್ನು ೧೦ ಲಕ್ಷ ಕೋಟಿಗೆ ಹೆಚ್ಚಳ ಮಾಡಲಾಗಿದ್ದು, ಇದು ಜಿಡಿಪಿಯ ಶೇ.೩.೩ ರಷ್ಟಾಗುತ್ತದೆ. ಇದು ಭಾರತದ ಬದಲಾದ ಆರ್ಥಿಕ ಶಕ್ತಿಗೆ ನಿದರ್ಶನ ಎಂದು ಹೇಳಿದ್ದಾರೆ.
ಕೊರೋನಾ ಕಾಲಘಟದಲ್ಲಿ ದೇಶದ ಯಾವೊಬ್ಬ ಪ್ರಜೆಯೂ ಹಸಿದಿರಬಾರದೆಂಬ ಕಾರಣಕ್ಕೆ ಪಿಎಂ ಗರೀಬ್ ಕಲ್ಯಾಣ ಯೋಜನೆಯಲ್ಲಿ ಉಚಿತವಾಗಿ ಅಕ್ಕಿ ಹಾಗೂ ಧಾನ್ಯ ವಿತರಣೆ ಮಾಡಲಾಗಿತ್ತು. ಮುಂದಿನ ಒಂದು ವರ್ಷದ ಅವಧಿಗೆ ಈ ಯೋಜನೆ ವಿಸ್ತರಣೆ ಮಾಡಿರುವುದು ಕೇಂದ್ರ ಸರ್ಕಾರದ ಮಾತೃ ಹೃದಯದ ಸಂಕೇತ. ಅದೇ ರೀತಿ ಮಧ್ಯಮ ವರ್ಗದವರ ಬಹು ನಿರೀಕ್ಷಿತ ಆದಾಯ ತೆರಿಗೆ ಮಿತಿ ಹೆಚ್ಚಳ ಮಾಡಲಾಗಿದೆ. ೫ ಲಕ್ಷ ರೂ.- ೭ ಲಕ್ಷ ರೂ.ಗೆ ತೆರಿಗೆ ವಿನಾಯಿತಿ ನೀಡಿರುವುದು ಸ್ವಾಗತಾರ್ಹ ಎಂದು ಅಭಿಪ್ರಾಯಪಟ್ಟಿದ್ದಾರೆ.