ನಿಮಗೆ ವಿದೇಶದಲ್ಲಿ ಉದ್ಯೋಗದಲ್ಲಿ ಕೆಲಸ ಮಾಡುವ ಆಸಕ್ತಿಯಿದೆಯೇ, ವಿದೇಶದಲ್ಲಿ ಉದ್ಯೋಗಕ್ಕೆ ತೆರಳಲು ಇರಬೇಕಾದ ಅರ್ಹತೆಗಳೇನು, ಅಲ್ಲಿ ಎದುರಿಸಬೇಕಾದ ಕಾನೂನು ಪ್ರಕ್ರಿಯೆಗಳೇನು, ವಿದೇಶದಲ್ಲಿ ತೊದರೆಯಾದರೆ ಯಾರನ್ನು ಸಂಪರ್ಕಿಸಬೇಕು, ಸುರಕ್ಷಿತವಾಗಿ ವಿದೇಶಕ್ಕೆ ತೆರಳಿ, ಸುಗಮವಾಗಿ ಮರಳಿ ಹಿಂದಿರುಗಲು ಅನುಸರಿಸಬೇಕಾದ ಪ್ರಕಿಯೆಗಳೇನು, ಖಾಸಗಿ ಸಂಸ್ಥೆ ಮತ್ತು ಮಧ್ಯವರ್ತಿಗಳ ಮೂಲಕ ದುಬಾರಿ ಶುಲ್ಕ ನೀಡಿ ವಿದೇಶಗಳಿಗೆ ತೆರಳಿ ಅಲ್ಲಿ ತೊಂದರೆಯಾದಾಗ ಏನು ಮಾಡುವುದು ಈ ಎಲ್ಲಾ ಸಂದೇಹಗಳಿಗೆ ಉಚಿತವಾಗಿ ಪರಿಹಾರ ನೀಡುವ ಅಂತರಾಷ್ಟ್ರೀಯ ವಲಸೆ ಮಾಹಿತಿ-ಕೇಂದ್ರ ಉಡುಪಿ ಜಿಲ್ಲೆಯಲ್ಲಿಯೇ ಇದೆ…
ರಾಜ್ಯ ಸರ್ಕಾರವು ವಿದೇಶಕ್ಕೆ ತೆರಳುವ ರಾಜ್ಯದ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಅಸಂಘಟಿತ ಕಾರ್ಮಿಕ ಮಂಡಳಿಯ ಮೂಲಕ ಆರಂಭಿಸಿರುವ ರಾಜ್ಯದಲ್ಲಿನ 4 ಪ್ರಾಯೋಗಿಕ ಅಂತರರಾಷ್ಟಿಯ ವಲಸೆ ಕೇಂದ್ರಗಳ, ಒಂದು ಅಂತರಾಷ್ಟ್ರೀಯ ವಲಸೆ ಮಾಹಿತಿ-ಕೇಂದ್ರ. ಉಡುಪಿಯ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಾರ್ಮಿಕ ಇಲಾಖೆಯಲ್ಲಿದೆ .
ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಮಾಜಿಕ ಭದ್ರತಾ ಮಂಡಳಿ, ಸಾಗರೋತ್ತರ ನೇಮಕಾತಿ ಸಂಸ್ಥೆ-ಕರ್ನಾಟಕ ಸರ್ಕಾರದ ಸ್ವಾಮಿತ್ವದ ಸಂಸ್ಥೆಯು ಉದ್ಯೋಗ ಅರಸಿ ರಾಜ್ಯದಿಂದ ವಿದೇಶಕ್ಕೆ ತೆರಳುವ ಎಲ್ಲಾ ಕಾರ್ಮಿಕರಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದು, ವಿದೇಶದಲ್ಲಿನ ಉದ್ಯೋಗವಕಾಶಗಳು, ಬೇಕಾದ ಅರ್ಹತೆಗಳು. ಉದ್ಯೋಗದ ಕುರಿತು ಸಮಾಲೋಚನೆ ಮತ್ತು ಮಾರ್ಗದರ್ಶನ, ಮ್ಯಾನೇಜ್ ಮೆಂಟ್ ಇನ್ ಫಾರ್ ಮೇಷನ್ ಸಿಸ್ಟಂ ಅಡಿಯಲ್ಲಿ ನೊಂದಾವಣಿ, ದಾಖಲಾತಿಗಳ ಪರಿಶೀಲನೆ ವಿಧಾನ, ಕರಾರು ವಿವರಣೆಗಳ ಮಾಹಿತಿ, ಪ್ರಯಾಣದಲ್ಲಿ ಅನುಸರಿಸಬೇಕಾದ ವಿಧಾನಗಳ ಸೇರಿದಂತೆ ಎಲ್ಲಾ ರೀತಿಯ ಸಮಗ್ರ ಮಾರ್ಗದರ್ಶನ ಈ ಕೇಂದ್ರದಲ್ಲಿ ದೊರೆಯಲಿದೆ.
ಈ ಕೇಂದ್ರಗಳ ಮೂಲಕ ವಿದೇಶಕ್ಕೆ ತೆರಳಿದ್ದಲ್ಲಿ, ವಿದೇಶದಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ಸರಕಾರದ ವತಿಯಿಂದ ಅಗತ್ಯ ನೆರವು ದೊರೆಯಲಿದ್ದು, ವಿದೇಶದಲ್ಲಿದ್ದರೂ ಸಹ ಎಲ್ಲಾ ಸಂದರ್ಭದಲ್ಲಿ ಸುರಕ್ಷಿತವಾಗಿ ಇರಲು ಸಾಧ್ಯವಾಗಲಿದೆ ಅಲ್ಲದೆ ನಿಮಗೆ ಉದ್ಯೋಗ ನೀಡಿದ ಸಂಸ್ಥೆಯೊಂದಿಗೆ ನಿರಂತರ ಸಂಪಕದಲ್ಲಿದ್ದು, ಆ ದೇಶದಲ್ಲಿನ ಭಾರತೀಯ ರಾಯಭಾರ ಕಚೇರಿಯಿಂದ ಅಗತ್ಯ ನೆರವು ಒದಗಿಸುವುದರ ಜೊತೆಗೆ ನಿಮೆಗೆ ವಿಮೆ ಪಡೆಯಲು ಮತ್ತು ಕಲ್ಯಾಣ ನಿಧಿಯ ಮೊತ್ತ ದೊರೆಯಲು ಸಹ ಸಹಕರಿಸಲಿದೆ.
ಈ ಕೇಂದ್ರದ ಮೂಲಕ ಉದ್ಯೋಗಕ್ಕೆ ತೆರಳಲು ಇಚ್ಚಿಸಿದ್ದಲ್ಲಿ ಈಗಾಗಲೇ ಇ-ಮೈಗ್ರೇಟ್ ಪೋರ್ಟಲ್ ನಲ್ಲಿ ಉದ್ಯೋಗದ ಬೇಡಿಕೆ ಕೋರಿರುವ ನೋಂದಣಿ ಮಾಡಿರುವ ವಿದೇಶಿ ಸಂಸ್ಥೆಗಳ ನೈಜತೆ ಪರಿಶೀಲಿಸಿ, ಉದ್ಯೋಗದಾತ ಸಂಸ್ಥೆಯಲ್ಲಿ ಯಾವುದೇ ಸಂದರ್ಭದಲ್ಲಿ ಕಾರ್ಮಿಕರಿಗೆ ಅನಗತ್ಯ ತೊಂದರೆಗಳು ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿದೆ.
ವಿಶೇಷವಾಗಿ ವಿದೇಶದಲ್ಲಿ ಉದ್ಯೋಗಕ್ಕೆ ತೆರಳುವ ಮಹಿಳಾ ಉದ್ಯೋಗಿಗಳ ಬಗ್ಗೆ ಕೇಂದ್ರವು ಹೆಚ್ಚಿನ ಕಾಳಜಿ ವಹಿಸಲಿದೆ. ವಿದೇಶದಿಂದ ವಾಪಸಾದ ಬಳಿಕ ಕಾರ್ಮಿಕರ ಕೌಶಲ್ಯ ಸಂಗ್ರಹ ಮತ್ತು ಮರು ವಲಸೆಗೆ ಸಹಾಯ ಮಾಡುವುದರ ಜೊತೆಗೆ, ಪುರ್ನವಸತಿ ಬಗ್ಗೆ ಮಾಹಿತಿ ನೀಡಲಿದ್ದು, ಕುಂದು ಕೊರತೆಗಳ ನಿವಾರಣೆ ಮತ್ತು ವಿಮಾ ಮೊತ್ತವನ್ನು ಪಡೆಯಲು ಸಹಾಯ ಮಾಡಲಿದೆ.
ವಿದೇಶಕ್ಕೆ ತೆರಳುವ ಮುನ್ನ 8 ಗಂಟೆಗಳ ಸಮಗ್ರ ತರಬೇತಿಯನ್ನು ಅಭ್ಯರ್ಥಿ ಗಳಿಗೆ ನೀಡಲಿದ್ದು, ವಿದೇಶ ಪ್ರಯಾಣದ ಅವಧಿಯಲ್ಲಿ ಮತ್ತು ನಂತರ ವಹಿಸಬೇಕಾದ ಮುನ್ನೆಚ್ಚರಿಕೆ ವಿಧಾನ ಗಳು, ಸಿದ್ಧತೆಗಳು, ವಿಮಾನ ನಿಲ್ದಾಣದಲ್ಲಿ ವ್ಯವಹರಿಸುವ ಕಾರ್ಯವಿಧಾನ ಬಗ್ಗೆ ಸಹ ತರಬೇತಿ ನೀಡಲಾಗುತ್ತದೆ.
ಪ್ರಸ್ತುತ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಉಡುಪಿ, ದಾವಣಗೆರೆ. ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಈ ಕೇಂದ್ರಗಳನ್ನು ತೆರೆಯಲಾಗಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾವಿರಾರು ಮಂದಿ ಉದ್ಯೋಗ ಅರಸಿ ವಿದೇಶಗಳಿಗೆ ತೆರಳುತ್ತಿದ್ದು ಈ ಕೇಂದ್ರದ ಪ್ರಯೋಜನ ಪಡೆಯುವ ಮೂಲಕ ವಿದೇಶದಲ್ಲಿ ಸೂಕ್ತ ಉದ್ಯೋಗ ಪಡೆದು ಅಲ್ಲಿಯೂ ನೆಮ್ಮದಿಯ ಜೀವನ ನಡೆಸಲು ಅಂತರಾಷ್ಟ್ರೀಯ ವಲಸೆ ಮಾಹಿತಿ-ಕೇಂದ್ರ ಸಕಲ ನೆರವು ನೀಡಲಿದೆ.
ಉಡುಪಿ ಮತ್ತು ದ,ಕನ್ನಡ ಜಿಲ್ಲೆಗಳಿಂದ ಸುಮಾರು 40000 ಕ್ಕೂ ಅಧಿಕ ಮಂದಿ ಮಧ್ಯಪ್ರಾಚ್ಯ ದೇಶದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಖಾಸಗಿ ಸಂಸ್ಥೆಗಳು ಮತ್ತು ಮದ್ಯವರ್ತಿಗಳ ಮೂಲಕ ದುಬಾರಿ ಶುಲ್ಕ ನೀಡಿ , ಸಮರ್ಪಕ ದಾಖಲೆ ಮತ್ತು ಮಾಹಿತಿಯಿಲ್ಲದೇ ವಿದೇಶಗಳಿಗೆ ತೆರಳಿ , ಅಲ್ಲಿ ಸೂಕ್ತ ದಾಖಲೆಗಳ ಮತ್ತು ಇತರೆ ಕಾನೂನು ತೊಡುಕುಗಳಿಗೆ ಸಿಲುಕಿಕೊಂಡಾಗ ಇವರಿಂದ ಸೂಕ್ತ ನೆರವು ದೊರೆಯದೇ ಕಷ್ಟಕ್ಕೆ ಸಿಲುಕುತ್ತಿರುವುದು ಕೇಳಿಬರುತ್ತಿದೆ. ಜಿಲ್ಲೆಯಿಂದ ವಿದೇಶಕ್ಕೆ ತೆರಳುವವವರು, ಜಿಲ್ಲೆಯಲ್ಲಿ ಸರ್ಕಾರ ಆರಂಭಿಸಿರುವ ವಲಸೆ ಮಾಹಿತಿ ಕೇಂದ್ರದ ನೆರವಿನಿಂದ ವಿದೇಶದಲ್ಲಿ ಸೂಕ್ತ ಉದ್ಯೋಗದ ಆಯ್ಕೆ ಮಾಡಿಕೊಳ್ಳುವುದರೊಂದಿಗೆ ನಮ್ಮೆದಿಯ ಮತ್ತು ಸುರಕ್ಷಿತ ಜೀವನ ನಡೆಸಲು ಸಾಧ್ಯವಾಗಲಿದೆ. ಈ ಕೇಂದ್ರದ ಸೌಲಭ್ಯಗಳ ಬಗ್ಗೆ ಮತ್ತು ವಿದೇಶದಲ್ಲಿ ಉದ್ಯೋಗಕ್ಕೆ ತೆರಳಬಯಸುವ ಉದ್ಯೋಗಾಕಾಂಕ್ಷಿಗಳು ದೂರವಾಣಿ ಸಂಖ್ಯೆ 0820-2574851 ಅಥವಾ 24×7 ಕಾರ್ಮಿಕ ಸಹಾಯವಾಣಿ ಸಂಖ್ಯೆ 155214 ನ್ನು ಸಂಪರ್ಕಿಸಿ ಈ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬಹುದು.
ಈ ಬಗ್ಗೆ ಇತ್ತೀಚೆಗೆ ನಡೆದ ಉದ್ಯೋಗಾಕಾಂಕ್ಷಿ ಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ 130 ಕ್ಕೂ ಹೆಚ್ಚು ಮಂದಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. : ಕುಮಾರ್ ಬಿ. ಆರ್, ಜಿಲ್ಲಾ ಕಾರ್ಮಿಕ ಅಧಿಕಾರಿ, ಉಡುಪಿ ಉಪ ವಿಭಾಗ, ಉಡುಪಿ