ಉಡುಪಿ, ಜ.18: ಕಾಂಗ್ರೆಸ್ ಸರಕಾರ ಅವಧಿಯಲ್ಲಿನ ಕೊಡುಗೆಗಳನ್ನು ತಿಳಿಸಿ ಜನಜಾಗೃತಿ ಮೂಡಿಸುವ ಹಾಗೂ ರಾಜ್ಯ ಬಿಜೆಪಿ ಸರಕಾರ ವೈಫಲ್ಯವನ್ನು ಜನರ ಮುಂದಿಡುವ ಉದ್ದೇಶದಿಂದ ‘ಪ್ರಜಾ ಧ್ವನಿ’ ಸಮಾವೇಶವನ್ನು ಜ.22ರಂದು ಬೆಳಗ್ಗೆ 10ಗಂಟೆಗೆ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದೆ. ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ತಿಳಿಸಿದ್ದಾರೆ.
ಉಡುಪಿ ಕಾಂಗ್ರೆಸ್ ಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾ ಧ್ವನಿ ಸಮಾವೇಶವನ್ನು ಪ್ರತಿ ಜಿಲ್ಲೆಯಲ್ಲೂ ನಡೆಸಲು ಉದ್ದೇಶಿಸ ಲಾಗಿದೆ. ಈಗಾಗಲೇ ನಾಲ್ಕೈದು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಎಂದು ಅವರು, ಉಡುಪಿಯ ಸಮಾವೇಶದಲ್ಲಿ 25ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲಾದವರು ಭಾಗವಹಿಸಲಿರುವರು ಎಂದರು.
ಹಿಂದಿನ ಬಾಗಿಲಿನ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ಮಿತಿಮೀರಿದ ಭ್ರಷ್ಟಾಚಾರದಲ್ಲಿ ತೊಡಗಿದೆ. ಬಿಜೆಪಿಯವರಿಗೆ ತಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ ಅಂಶಗಳನ್ನು ಈಡೇರಿಸಿಲ್ಲ. ಬಿಜೆಪಿಯವರ ಜನ ಸಂಕಲ್ಪ ಯಾತ್ರೆ ಚುನಾವಣೆ ಬಂದಾಗ ಮಾತ್ರ, ಚುನಾವಣೆ ನಂತರ ಭ್ರಷ್ಟಾಚಾರದ ಮೂಲಕ ಧನ ಸಂಕಲ್ಪ ಯಾತ್ರೆಯನ್ನು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ಮೈಸೂರು ವಿಭಾಗದ ಉಸ್ತುವಾರಿ ರೋಝೀ ಜೋನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಅಖಿಲ ಭಾರತ ಮೀನುಗಾರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜ್ಯಸಭಾ ಸದಸ್ಯ ಪ್ರತಾಪನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಎಂ.ಎ.ಗಪೂರ್, ಮಂಜುನಾಥ್ ಸೊನೇಗಾರ್, ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ಹರೀಶ್ ಕಿಣಿ ಮೊದಲಾದವರು ಹಾಜರಿದ್ದರು