ಪಡುಬಿದ್ರಿ: ಅನಾರೋಗ್ಯದಿಂದ ಬಳಲುತ್ತಿದ್ದ ಪಡುಬಿದ್ರಿ ಕಂಚಿನಡ್ಕದ ಸಂಜೀವ(72) ಹಾಗೂ ಅವರ ಪುತ್ರ ಉದಯ (45) ಒಂದೇ ದಿನ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.
ಅವರಿಬ್ಬರೂ ಪಡುಬಿದ್ರಿಯಲ್ಲಿ ಗೂಡ್ಸ್ ಟೆಂಪೋ ಬಾಡಿಗೆ ನಡೆಸಿ ಜೀವನ ಸಾಗಿಸುತ್ತಿದ್ದರು. ಸಂಜೀವ ಅವರು 40 ವರ್ಷ ಹಾಗೂ ಉದಯ 20 ವರ್ಷ ಚಾಲಕರಾಗಿ ದುಡಿದಿದ್ದರು. ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದರು. ಉದಯ ಕೆಲವು ದಿನಗಳ ಹಿಂದೆ ಜ್ವರ ಬಾಧೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ನಿಧನರಾಗಿದ್ದರು. ಅವರ ಅಂತ್ಯ ಸಂಸ್ಕಾರ ಪೂರ್ಣಗೊಂಡ ಬಳಿಕ ಹಾಸಿಗೆ ಹಿಡಿದಿದ್ದ ಸಂಜೀವ ಅವರೂ ಸಾವನ್ನಪ್ಪಿದ್ದು ವಿಪರ್ಯಾಸವಾಗಿತ್ತು.
ಪತ್ನಿ, 2 ಪುತ್ರರು ಹಾಗೂ 2 ಪುತ್ರಿಯರೊಂದಿಗೆ ಬಡತನದಲ್ಲಿಯೇ ಜೀವನ ಸಾಗಿಸುತ್ತಿದ್ದ ಸಂಜೀವ ಅವರ ಓರ್ವ ಮಗ ಈ ಹಿಂದೆಯೇ ನಿಧನ ಹೊಂದಿದ್ದರು. ಬಳಿಕ ಅವರಿಬ್ಬರೂ ಅನಾರೋಗ್ಯಕ್ಕೆ ತುತ್ತಾಗಿ ಕುಟುಂಬ ಕಂಗಾಲಾಗಿತ್ತು. ಇದೀಗ ಅವರಿಬ್ಬರ ಸಾವು ಪತ್ನಿ, ಹಾಗೂ ಅವಿವಾಹಿತ ಪುತ್ರಿಯರಿಗೆ ದೊಡ್ಡ ಆಘಾತವನ್ನೇ ತಂದೊಡ್ಡಿದೆ