ಉಡುಪಿ: ಮೂವರು ಮಹಿಳೆಯರು ಗ್ರಾಹಕರಂತೆ ಬಂದು ಮೋಸದಿಂದ ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ತೆಗೆದುಕೊಂಡು ಹೋಗಿರುವ ಕುರಿತು ವರದಿಯಾಗಿದೆ.
ಉಡುಪಿ ಕನಕದಾಸ ರಸ್ತೆಯಲ್ಲಿ ಮಾರುತಿ ಜುವೆಲ್ಲರಿ ಶಾಪ್’ಗೆ 35 ರಿಂದ 45 ವರ್ಷ ಪ್ರಾಯದ ಮೂವರು ಮಹಿಳೆಯರು ಗ್ರಾಹಕರಂತೆ ಅಂಗಡಿಗೆ ಬಂದು 15, 800 ಗ್ರಾಂ ತೂಕದ ಒಂದು ಚಿನ್ನದ ಚೈನ್ ಮತ್ತು 10.150 ಗ್ರಾಂ ತೂಕದ ಚಿನ್ನದ ಬ್ರೆಸ್ ಲೆಟ್ ಖರೀದಿಸಿದ್ದಾರೆ. ಇದಕ್ಕೆ ಬದಲಾಗಿ ಆರೋಪಿತೆಯರು ತಮ್ಮ ಬಳಿ ಇದ್ದ ಹಳೆಯ 31.490 ಗ್ರಾಂ ತೂಕದ ಒಂದು ನೆಕ್ಲೇಸ್ ಮತ್ತು 10.940 ಗ್ರಾಂ ತೂಕದ ಬೆಂಡೋಲೆಗೆ ಹಾಕುವ ಜುಮುಕಿ ನೀಡಿ 48,771/- ರೂಪಾಯಿ ಉಳಿಕೆ ಹಣದ ಪೈಕಿ 19,000/- ರೂಪಾಯಿಯನ್ನು ನಗದಾಗಿ ಪಡೆದು ಕೊಂಡು ಅಂಗಡಿಯಿಂದ ಹೋಗಿದ್ದಾರೆ.
ಮಹಿಳೆಯರು ವ್ಯವಹಾರದ ಸಮಯ ಚೌಕಾಸಿಯನ್ನು ಮಾಡುವ ವೇಳೆ ಗಮನವನ್ನು ಬೇರೆಡೆಗೆ ಸೆಳೆದು ಪರೀಕ್ಷೆಯ ಸಮಯ ನೀಡಿದ್ದ ಅಸಲಿ ಚಿನ್ನದ ಬದಲಾಗಿ ಆಭರಣಗಳನ್ನು ಹೋಲುವ ನಕಲಿ ಚಿನ್ನದ ಆಭರಣಗಳನ್ನು ನೀಡಿ ವಂಚನೆ ಹಾಗೂ ಮೋಸ ಮಾಡಿ ಒಟ್ಟು 1,98,923/- ಮೌಲ್ಯದ ಅಸಲಿ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿರುವುದಾಗಿ ಆರೋಪಿಸಲಾಗಿದೆ.
ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2024 ಕಲಂ: 417, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.