ಉಡುಪಿ, ಎ.12: ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಮತ್ತು ತಂತ್ರ ಗಾರಿಕೆ ಇಟ್ಟುಕೊಂಡು ಚುನಾವಣೆಯನ್ನು ಎದುರಿಸುತ್ತಿದ್ದೇವೆಯೇ ಹೊರತು ಎದುರಾಳಿ ಅಭ್ಯರ್ಥಿಗಳ ಬಗ್ಗೆ ಆಲೋಚನೆ ಮಾಡಿ ಅಲ್ಲ. ಬಿಜೆಪಿ ಅಭ್ಯರ್ಥಿ ನಮ್ಮ ಸಮುದಾಯದವರೇ ಆದರೂ ಬುದ್ದಿವಂತರು, ವಿದ್ಯಾವಂತರಾಗಿರುವ ಈ ಕ್ಷೇತ್ರದ ಮತದಾರರು ತಮಗೆ ಸೂಕ್ತವಾದ ಶಾಸಕರನ್ನು ಆಯ್ಕ ಮಾಡಲಿದ್ದಾರೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ತಿಳಿಸಿದ್ದಾರೆ.
ಉಡುಪಿ ಕಾಂಗ್ರೆಸ್ ಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರು ತಿಂಗಳುನಿಂದ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದೇವೆ. ಈಗಾಗಲೇ 100 ಮಂದಿಯ ಕಮಿಟಿ ರಚನೆ ಮಾಡಿ ಕಾರ್ಯ ಪ್ರವೃತ್ತರಾಗಿದ್ದೇವೆ. ಚುನಾವಣಾ ಪ್ರಚಾರ ನಡೆಸಲು ಸಿದ್ಧರಾಗಿದ್ದೇವೆ. ನಾಳೆಯಿಂದ ಉಡುಪಿ ನಗರಸಭೆ ವ್ಯಾಪ್ತಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಕಾರ್ಯ ಆರಂಭಿಸುತ್ತಿದ್ದೇವೆ. ಈ ಚುನಾವಣೆಯನ್ನು ನಾವು ಸವಾಲಾಗಿ ತೆಗೆದುಕೊಂಡಿದ್ದೇವೆ ಎಂದರು.
ಕ್ಷೇತ್ರದ ಜನತೆ ಬಿಜೆಪಿ ದುರಾಡಳಿತದಿಂದ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ನಿರೀಕ್ಷೆಯಲ್ಲಿದ್ದಾರೆ. ಜನರಿಗೆ ಬೇಕಾದ ವಿದ್ಯಾವಂತ ಅಭ್ಯರ್ಥಿಗಳನ್ನೇ ಕಾಂಗ್ರೆಸ್ ಪಕ್ಷ ನೀಡಿದೆ. ಮನೆಮನೆಗೆ ಭೇಟಿ ನೀಡಿದಾಗ ಮತದಾರರು ಒಳ್ಳೆಯ ರೀತಿಯ ಸ್ಪಂದನೆ ಕೊಡುತ್ತಿದ್ದಾರೆ ಎಂದು ಅವರು ಹೇಳಿದರು. ನಾಮಪತ್ರವನ್ನು ಎ.17ರಂದು ಬೆಳಗ್ಗೆ 11.30ರ ಒಳಗೆ ಸಲ್ಲಿಸಲು ತೀರ್ಮಾನ ಮಾಡಿದ್ದೇನೆ. ನಾನು ರಾಜಕೀಯಕ್ಕೆ ಹೊಸಬ ಅಲ್ಲ. ನಾನು ನನ್ನ 26ನೇ ವರ್ಷ ವಯಸ್ಸಿನ ಗ್ರಾಮೀಣ ಕಾಂಗ್ರೆಸ್ನ ಅಧ್ಯಕ್ಷನಾಗಿದ್ದೇನೆ. ನಿರಂತರವಾಗಿ ನಾನು ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಕಳೆದ ಗ್ರಾಪಂ ಚುನಾ ವಣೆಯಲ್ಲೂ ನಾನು ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಂಪೂರ್ಣ ಬೆಂಬಲ ದೊರೆತಿದೆ. ಅವರೇ ನಮ್ಮ ಬೆನ್ನೆಲುಬು ಎಂದು ಅವರು ತಿಳಿಸಿದರು.ನಾನು ಶಾಸಕನಾಗಿ ಆಯ್ಕೆಯಾದರೆ ಎಲ್ಲ ವರ್ಗದವರ ಆರ್ಥಿಕ ಪ್ರಗತಿಗೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗುವುದು. ಶಿಕ್ಷಣ, ಕೈಗಾರಿಕೆ, ಪ್ರವಾಸೋದ್ಯಮ, ಆರೋಗ್ಯ ಕ್ಷೇತ್ರಗಳನ್ನು ಬಳಸಿಕೊಂಡು ಮುಂದಿನ ಪೀಳಿಗೆಗೆ ಅನುಕೂಲಕರವಾದ ವಾತಾವರಣವನ್ನು ಸೃಷ್ಠಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಬ್ರಹ್ಮಾವರ ಹಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಮುಖಂಡರಾದ ಕುಶಲ್ ಶೆಟ್ಟಿ, ವಕ್ತಾರ ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು.