ಕುಂದಾಪುರ: ಬಿಸಿಲಿನ ತಾಪ ದಿನೇ ದಿನೆ ಹೆಚ್ಚಾಗುತ್ತಿದ್ದು, ಗೇರು, ಮಾವು, ಹಲಸಿನ ಬೆಳೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಕರಾವಳಿ ಭಾಗದಲ್ಲಿ ಈ ಬಾರಿ ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದ್ದು, ಇದರಿಂದ ಕೆಲವೆಡೆ ಮಾವು, ಗೇರು ಮರಗಳಲ್ಲಿ ಈಗ ತಡವಾಗಿ ಹೂವು ಬಿಡಲು ಆರಂಭಿಸಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು, ಮಲೆನಾಡಿನ ಶಿವಮೊಗ್ಗ ಭಾಗದಲ್ಲಿ ನವೆಂಬರ್, ಡಿಸೆಂಬರ್, ಜನವರಿ ತಿಂಗಳಲ್ಲಿ ಮಾವು, ಹಲಸು, ಗೇರು ಚಿಗುರಿ, ಹೂವು ಬಿಡುವುದು ಸಾಮಾನ್ಯ. ಆದರೆ ಹೂವು ಬಿಡುವ ಕಾಲದಲ್ಲಿ ಹೂವು ಬಿಡದೆ ತಡವಾಗಿ ಈಗ ಸೆಕೆ ಜಾಸ್ತಿ ಆಗಿರುವುದ ರಿಂದ ಹೂವು ಬಿಡಲು ಆರಂಭಗೊಂಡಿದೆ.
ಮಾವು, ಗೇರು ಈಗ ಹೂವು ಬಿಡುತ್ತಿದ್ದು, ಇದರಿಂದ ಬೆಳೆಗಾರರಿಗೆ ಏನೂ ಲಾಭವಿಲ್ಲ. ಮಳೆಗಾಲದಲ್ಲಿ ಫಸಲು ಕೈಗೆ ಬರುವುದರಿಂದ ಆಗ ಅಷ್ಟೇನೂ ಬೇಡಿಕೆಯೂ ಇರುವುದಿಲ್ಲ. ಇದರಿಂದ ರೈತರಿಗೆ ನಷ್ಟ. ಬೆಳಗ್ಗೆ ಇಬ್ಬನಿ ಬೀಳುತ್ತಿರುವುದರಿಂದ ಹೂವು ಎಲ್ಲ ಕರಟಿ ಹೋಗುತ್ತಿದೆ. ಮಧ್ಯಾಹ್ನ ಜಾಸ್ತಿ, ರಾತ್ರಿ ಕಡಿಮೆ ಯಾಗುತ್ತಿದೆ. ಬೆಳಗ್ಗೆ ಮತ್ತೂ ಕನಿಷ್ಠ ಉಷ್ಣಾಂಶವಿದೆ.
ಮಧ್ಯಾಹ್ನ ಮತ್ತೆ ಗರಿಷ್ಠ ಉಷ್ಣಾಂಶವಿದ್ದು, ಇದು ಎಲ್ಲ ರೀತಿಯ ಬೆಳೆಗಳಿಗೆ ಪರಿಣಾಮ ಬೀಳುತ್ತದೆ ಎನ್ನುವುದಾಗಿ ಕೃಷಿಕರಾದ ಚಂದ್ರಶೇಖರ್ ಉಡುಪ ಕೆಂಚನೂರು ಹೇಳಿದ್ದಾರೆ.