ಉಡುಪಿ: ಕೇಂದ್ರ ಸರಕಾರದ ಅನುದಾನವನ್ನು ಕಡಿತಗೊಳಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಹೇಳಿಕೆ ಸಂವಿಧಾನ ವಿರೋಧಿಯಾಗಿದ್ದು, ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಆಗ್ರಹಿಸಿದರು.
ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹೇಳಿಕೆ ರಾಜ್ಯಗಳಿಗೆ ಬೆದರಿಕೆ ಒಡ್ಡುವ ರೀತಿಯಲ್ಲಿದೆ. ಹಾಗೆಯೇ ಈ ಹೇಳಿಕೆ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಕರ್ನಾಟಕದ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಉತ್ತರ ಪ್ರದೇಶ, ಮಣಿಪುರ, ಜಮ್ಮು ಕಾಶ್ಮೀರ ಮೊದಲಾದ ರಾಜ್ಯಗಳು ಬಹುಪಾಲು ಕೇಂದ್ರದ ಅನುದಾನವನ್ನು ಮೆಚ್ಚಿಕೊಂಡು ಇರಬಹುದು. ಆದರೆ ಕರ್ನಾಟಕ ಶೇ.94ರಷ್ಟು ಅನುದಾನವನ್ನು ರಾಜ್ಯದಿಂದಲೇ ಸೃಷ್ಟಿಸಿ ಬಳಸಿಕೊಳ್ಳುತ್ತಿದೆ. ಕೇವಲ ಶೇ.4ರಿಂದ ಶೇ.6ರಷ್ಟು ಮಾತ್ರ ಕೇಂದ್ರ ಸರಕಾರದಿಂದ ಬರುತ್ತಿದೆ. ಅದಾಗ್ಯೂ ವಾರ್ಷಿಕ 6 ಲಕ್ಷ ಕೋಟಿ ರೂ. ವಿವಿಧ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಕರ್ನಾಟಕದಿಂದ ಹೋಗುತ್ತಿದೆ. ಇದರಲ್ಲಿ 4.25 ಲಕ್ಷ ಕೋಟಿ ಜಿಎಸ್‌ಟಿ, ಐಟಿ ಆದಾಯ ಸೇರಿಕೊಂಡಿದೆ. 2 ಲಕ್ಷ ಕೋಟಿ ಸೆಸ್ ಮೂಲಕ ಸಂದಾಯ ಮಾಡುತ್ತಿದ್ದೇವೆ. ಆದರೆ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಬರುವುದು ಕೇವಲ 48 ರಿಂದ 50 ಸಾವಿರ ಕೋಟಿ ಮಾತ್ರ ಎಂದು ವಾಗ್ದಾಳಿ ನಡೆಸಿದರು.
ಡಬಲ್ ಇಂಜಿನ್ ಸರ್ಕಾರ ಕರ್ನಾಟಕಕ್ಕೆ ಅಗತ್ಯವಿಲ್ಲ. ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕೇಂದ್ರ ಸರ್ಕಾರದ ಇಡೀ ಮಂತ್ರಿಮಂಡಲವೇ ಇಲ್ಲಿ ಪ್ರಚಾರ ನಡೆಸುತ್ತಿದೆ. ಕಾರಣ ಅವರಿಗೆ ರಾಜ್ಯದ ನಾಯಕರ ಮೇಲೆ ವಿಶ್ವಾಸ ಇಲ್ಲ. ಕರ್ನಾಟಕದ ಜನತೆ ಡಬಲ್ ಇಂಜಿನ್ ಸರಕಾರದಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರಕಾರವನ್ನೇ ಬಯಸುತ್ತಿದ್ದಾರೆ ಎಂದು ಹೇಳಿದರು.
ಕರಾವಳಿಯಲ್ಲಿ ಕಾಂಗ್ರೆಸ್ ಹವಾ
ಬಿಜೆಪಿ ನಾಯಕರು ಚುನಾವಣೆ ಪ್ರಚಾರ ಸಂದರ್ಭದಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ, ಶೇ.40ರಷ್ಟು ಕಮಿಷನ್ ಇತ್ಯಾದಿ ಯಾವುದರ ಬಗ್ಗೆಯೂ ಮಾತನಾಡುತ್ತಿಲ್ಲ. ಕೇವಲ ಅಂತಾರಾಷ್ಟ್ರೀಯ ವಿಚಾರ ಮತ್ತು ಭಾವನಾತ್ಮಕ ವಿಷಯಗಳನ್ನು ಪದೇಪದೇ ಹೇಳುತ್ತಿದ್ದಾರೆ. ಇದಕ್ಕೆಲ್ಲ ಜನರು ಮರಳಾಗುವುದಿಲ್ಲ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸೀಟುಗಳನ್ನು ಕಾಂಗ್ರೆಸ್ ಜಯಿಸಲಿದೆ. ಕರಾವಳಿಯಾದ್ಯಂತ ಕಾಂಗ್ರೆಸ್ ಹವಾ ಇದೆ ಎಂದರು.
ರಾಜ್ಯದಲ್ಲಿ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.36ರಷ್ಟು ಮತ ಪಡೆದಿತ್ತು. ಈ ಬಾರಿ ಹೆಚ್ಚಿನ ಮತಗಳಿಕೆಯ ಜತೆಗೆ 140ರಿಂದ 150 ಸೀಟುಗಳೊಂದಿಗೆ ಪೂರ್ಣ ಬಹುಮತದ ಸರಕಾರ ಬರಲಿದೆ ಎಂದರು.
ಕಾನೂನು ಕೈಗೆತ್ತಿಕೊಂಡರೆ ಕ್ರಮ
ಸಾಮರಸ್ಯ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟವಾಗಿದೆ. ಯಾರೇ ಕಾನೂನು ಕ್ರಮ ಕೈಗೊತ್ತಿಕೊಂಡರೂ, ನೈತಿಕ ಪೊಲೀಸ್ ಗಿರಿ ನಡೆಸಿದರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿದೆ. ಯಾವುದೇ ಸಂಘಟನೆಯನ್ನು ನಿಷೇಧ ಮಾಡುವುದು ರಾಜ್ಯ ಸರಕಾರದಿಂದ ಸಾಧ್ಯವಿಲ್ಲ. ರಾಜ್ಯದಿಂದ ಕೇಂದ್ರಕ್ಕೆ ಶಿಫಾರಸು ಮಾಡಬಹುದು. ಅಂತಿಮ ನಿರ್ಧಾರವನ್ನು ಕೇಂದ್ರವೇ ತೆಗೆದುಕೊಳ್ಳಲಿದೆ ಎಂದು ಬಜರಂಗದಳ ನಿಷೇಧ ಕುರಿತು ಮಂಜುನಾಥ್ ಭಂಡಾರಿ ಅವರು ಸ್ಪಷ್ಟನೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ˌ ಕೆಪಿಸಿಸಿ ಸಂಯೋಜಕರಾದ ದಿನೇಶ್ ಪುತ್ರನ್ ˌ ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗಡೆ ಕೊಳ್ಕೆಬೈಲ್ ˌ ವಕ್ತಾರರಾದ ಭಾಸ್ಕರ್ ರಾವ್ ಕಿದಿಯೂರ್ ಪ್ರಚಾರ ಸಮಿತಿಯ ಅಧ್ಯಕ್ಷ ಹರೀಶ್ ಕಿಣಿ ˌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಶಲ್ ಶೆಟ್ಟಿˌ ಲೀಗಲ್ ಸೆಲ್ ಅಧ್ಯಕ್ಷ ಹರೀಶ್ ಶೆಟ್ಟಿ ಪಾಂಗಾಳ ˌ ಪಕ್ಷದ ಮುಖಂಡರಾದ ರವಿ ಶೆಟ್ಟಿ ಉಪಸ್ಥಿತರಿದ್ದರು.