ಉಡುಪಿ: ಮುಖ್ಯಮಂತ್ರಿ ಬೊಮ್ಮಾಯಿ ಕಳೆದ ನಾಲ್ಕು ವರ್ಷಗಳಲ್ಲಿನ ದುರಾಳಿಡ, ದೌರ್ಜನ್ಯ ಹಾಗೂ ಅನಾಹುತ ಮಾಡಿರುವುದಕ್ಕೆ ಕ್ಷಮೆಯಾಚನೆ ಗಾಗಿ ಮತ್ತು ಪ್ರಾಯಃಶ್ಚಿತವಾಗಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭರವಸೆ ಈಡೇರಿಸಲು ಸಾಧ್ಯವಾಗದ ಕಾರಣ ಕರಾವಳಿ ಜಿಲ್ಲೆಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ತಮ್ಮ ಅಭ್ಯರ್ಥಿಗಳನ್ನು ಬದಲಾವಣೆ ಮಾಡಿದೆ. ಶಿಸ್ತು ಮತ್ತು ದೇಶಭಕ್ತರ ಪಕ್ಷ ಎಂದು ಹೇಳುತ್ತಿದ್ದ ಬಿಜೆಪಿಯಲ್ಲಿ ಟಿಕೆಟ್ ವಂಚಿತರಿಂದ ಆಕ್ರೋಶ ಭುಗಿಲೆದ್ದಿದೆ. ಇದರಿಂದ ಬಿಜೆಪಿ ಬುಟಾಟಿಕೆ ಮಾಡುವ ಪಕ್ಷ ಎಂಬುದು ಸಾಬೀತಾಗಿದೆ ಎಂದರು.
ಕೇವಲ ಹಿಂದುತ್ವ ಅಂಜೆಂಡಾ ಇಟ್ಟುಕೊಂಡು ಜನರಲ್ಲಿ ಶಾಂತಿಯನ್ನು ಕದಡಿ ಧ್ವೇಷ ಭಾವನೆ ಕೆರಳಿಸುವ ಕೆಲಸ ಮಾಡುತ್ತಿರುವ ಬಿಜೆಪಿ ಬಿಜೆಪಿ ಪಕ್ಷದಲ್ಲಿ ಜನಸಾಮಾನ್ಯರ ಬದುಕಿನ ಬಗ್ಗೆ ಅಜೆಂಡಾ ಇಲ್ಲ. ಕಾಂಗ್ರೆಸ್ ಪಕ್ಷ ಜನರ ಬದುಕಿನ ಭಾವನೆಯನ್ನು ಸ್ಪಂದಿಸುವ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಇನ್ನು ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಸೇರಿದಂತೆ 30 ಮಂದಿ ಸ್ಟಾರ್ ಕ್ಯಾಂಪೆನ್ಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಪ್ರಬುದ್ಧ ರಾಜಕಾರಣಿಯಾಗಿರುವ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ತೀರ್ಮಾನ ಏನು ಎಂಬುದನ್ನು ಕಾದು ನೋಡಬೇಕಾಗಿದೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಮತ್ತು ನಾಯಕತ್ವವನ್ನು ಒಪ್ಪಿಕೊಳ್ಳುವ ಎಲ್ಲರನ್ನೂ ಪಕ್ಷ ಸ್ವಾಗತಿಸುತ್ತದೆ ಎಂದು ಅವರು ಹೇಳಿದರು.
ವೀರಪ್ಪ ಮೊಲಿ ಯಾವುದೇ ರಾಜಕೀಯ ಕಾರಣ ಇಲ್ಲದೆ ಇಡೀ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಮನ್ವಯ ಮೂಡಿಸಲು ಕೆಲವು ಅಭ್ಯರ್ಥಿಗಳ ಹೆಸರು ಸೂಚಿಸಿದ್ದಾರೆ. ಆ ಬಗ್ಗೆ ಅಂತಿಮ ತೀರ್ಮಾನವನ್ನು ಕಮಿಟಿ ತೆಗೆದುಕೊಳ್ಳಲಿದೆ. ಅವರು ಯಾವುದೇ ರೀತಿಯ ಪ್ರಭಾವ ಬೀರಿಲ್ಲ ಮತ್ತು ಪಟ್ಟು ಹಿಡಿದಿಲ್ಲ ಎಂದರು.
ಟಿಕೆಟ್ ಆಕಾಂಕ್ಷಿ ಕೃಷ್ಣಮೂರ್ತಿ ಆಚಾರ್ಯ ಮತ್ತು ಅವರ ಪತ್ನಿ ನನ್ನನ್ನು ಭೇಟಿ ಮಾಡಿ ಅವರ ಅನಿಸಿಕೆ ಹೇಳಿ, ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಆದರೆ ಯಾವುದೇ ಬೇಡಿಕೆಗಳನ್ನು ಮುಂದಿಟ್ಟಿಲ್ಲ. ಅವರಿಗೆ ಸಲ್ಪ ಅಸಮಾಧಾನ ಇದೆ. ಆ ಬಗ್ಗೆ ಹೇಳಿಕೊಂಡಿದ್ದಾರೆ. ಅದನ್ನು ನಾನು ಹೈಕಮಾಂಡ್ ಗಮನಕ್ಕೆ ತರುತ್ತೇನೆ ಎಂದು ಅವರು ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್, ಮುಖಂಡರಾದ ಎಂ.ಎ.ಗಫೂರ್, ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಅಣ್ಣಯ್ಯ ಶೇರಿಗಾರ್, ಅಮೃತ್ ಶೆಣೈ, ಭಾಸ್ಕರ ರಾವ್ ಕಿದಿಯೂರು, ನರಸಿಂಹಮೂರ್ತಿ ಹಾಜರಿದ್ದರು