ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಮಾಜ ಸೇವಕ ಗುರ್ಮೆ ಸುರೇಶ್ ಶೆಟ್ಟಿಯವರ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಸೇರಿದ ಜನಸ್ತೋಮವನ್ನು ಕಂಡು ಕಂಗೆಟ್ಟಿರುವ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ತಲೆಬುಡವಿಲ್ಲದ ಆರೋಪಗಳನ್ನು ಮಾಡುತ್ತಿರುವುದು ಹಾಸ್ಯಾಸ್ಪದ. ಸುಳ್ಳೇ ಸೊರಕೆ ಬಂಡವಾಳ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.
ಅವರು ಬಿಜೆಪಿ ಜಿಲ್ಲಾ ಮಾಧ್ಯಮ ಕೇಂದ್ರದಲ್ಲಿ ನಡೆದ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿ ಸಭೆಯ ಬಳಿಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ವಿರುದ್ಧ ಕಾಂಗ್ರೆಸ್ಸಿನ ಎಲ್ಲಾ ಅಪಪ್ರಚಾರಗಳು ಯಾವುದೇ ಫಲ ನೀಡದೇ ಇರುವ ಸನ್ನಿವೇಶದಲ್ಲಿ, ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಯವರು ಕಾಪುವಿಗೆ ಬಂದಾಗ ಹಣದ ಗಂಟು ತಂದಿದ್ದಾರೆ ಎಂದು ಸೊರಕೆಯವರು ಆದಾರ ರಹಿತವಾಗಿ ಆರೋಪಿಸಿರುವುದು ಅಪಪ್ರಚಾರವೇ ಕಾಂಗ್ರೆಸ್ಸಿನ ಜೀವಾಳ ಎಂಬುದನ್ನು ಸಾಬೀತುಪಡಿಸಿದೆ ಎಂದರು.
ಬಿಜೆಪಿ ವಿರುದ್ಧ ಬೆರಳು ತೋರಿಸುವ ಮೊದಲು ಸೊರಕೆಯವರು 2 ಕೋಟಿ ರೂಪಾಯಿಯನ್ನು ನೀಡಿ ಕಾಂಗ್ರೆಸ್ಸಿನ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ ಹಾಗೂ ಸೊರಕೆಯವರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದಿರುವ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿಯವರು ಆರೋಪಕ್ಕೆ ಸೊರಕೆ ಪ್ರಾಮಾಣಿಕವಾಗಿ ಉತ್ತರಿಸಲಿ ಎಂದರು.
ಸಮಾಜಮುಖಿ ಸತ್ಕಾರ್ಯಗಳ ಮೂಲಕ ಕಾಪು ಕ್ಷೇತ್ರದಲ್ಲಿ ತನ್ನದೇ ಆದ ಪ್ರಭಾವ ಹೊಂದಿರುವ ಸ್ವತಃ ಸ್ಥಳೀಯರೇ ಆಗಿರುವ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಲಿದ್ದು, ಪುತ್ತೂರಿನ ಸೊರಕೆಗೆ ಸೋಲು ನಿಶ್ಚಿತ. ಬಿಜೆಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಲಿದೆ ಎಂದರು.
ದೇಶದ ಭದ್ರತೆ ಹಾಗೂ ಎಲ್ಲ ವರ್ಗಗಳ ಶ್ರೇಯೋಭಿವೃದ್ಧಿಯಲ್ಲಿ ನಂಬಿಕೆ ಇರಿಸಿಕೊಂಡಿರುವ ಪ್ರಬುದ್ಧ ಜನತೆ ಕಾಂಗ್ರೆಸ್ಸಿನ ಸುಳ್ಳಿನ ಕಂತೆಯನ್ನು ಎಂದಿಗೂ ನಂಬುವುದಿಲ್ಲ. ಗೋಹತ್ಯೆ ನಿಷೇಧ ಕಾನೂನು, ಮತಾಂತರ ನಿಷೇಧ ಕಾನೂನು ಹಾಗೂ ಪಿಎಫ್ಐ ಮತ್ತು ಸಿಎಫ್ಐ ನಿಷೇಧದ ಬಗ್ಗೆ ತನ್ನ ನಿಲುವೇನು ಎಂಬುದನ್ನು ಸೊರಕೆಯವರು ಕಾಪು ಕ್ಷೇತ್ರದ ಜನತೆಗೆ ಮೊದಲು ಸ್ಪಷ್ಟಪಡಿಸಿ, ನಂತರ ಚುನಾವಣಾ ಪ್ರಚಾರಕ್ಕೆ ಮುಂದಡಿ ಇಡುವುದು ಸೂಕ್ತ ಎಂದರು.
ಮೊಸಳೆ ಕಣ್ಣೀರಿನ ಮೂಲಕ ಕ್ಷೇತ್ರದ ಜನತೆಯನ್ನು ಮರುಳು ಮಾಡಲು ಹೊರಟಿರುವ ಸೊರಕೆ, ರಮಾನಾಥ ರೈ, ಗೋಪಾಲ ಪೂಜಾರಿ, ಸಿದ್ಧರಾಮಯ್ಯ, ದೇಶಪಾಂಡೆ ಮುಂತಾದ ಹಲವಾರು ಕಾಂಗ್ರೆಸ್ ಅಭ್ಯರ್ಥಿಗಳು ಸೇರಿ ಇದು ತಮ್ಮ ಕೊನೆಯ ಚುನಾವಣೆ ಎಂದು ಗೋಗರೆಯತ್ತಿರುವುದು ನೋಡಿದರೆ ಪ್ರಾಯಶಃ ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಇದು ಕೊನೆಯ ಚುನಾವಣೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿಯ ಜಿಲ್ಲಾ ಸಂಚಾಲಕ ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಪಕ್ಷದ ಪ್ರಮುಖರು ಹಾಗೂ ಜಿಲ್ಲೆ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು ಉಪಸ್ಥಿತರಿದ್ದರು.