ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡಿಗೆ ವಾರಂಟಿ ಇಲ್ಲ : ಕೋಟ ಶ್ರೀನಿವಾಸ ಪೂಜಾರಿ

ಬಿಜೆಪಿ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಕಾರ್ಯಾಗಾರದ ಉದ್ಘಾಟನೆ

ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಯಾವುದೇ ಸರಕಾರ ಬಡವರಿಗೆ ನ್ಯಾಯವನ್ನು ಕೊಡುತ್ತಿರುವಾಗ ಇಲ್ಲಿಯವರೆಗೆ ಗ್ಯಾರಂಟಿ ಕಾರ್ಡನ್ನು ಕೊಟ್ಟಿಲ್ಲ. ಗ್ಯಾರಂಟಿ ಕಾರ್ಡ್ ಕೊಡುತ್ತೇವೆ ಎಂಬುದರ ಅರ್ಥವೇನೆಂದರೆ ಜನ ತಮ್ಮನ್ನು ನಂಬುವುದಿಲ್ಲ ಎಂಬುದಾಗಿದೆ. ಈ ಕಾರಣಕ್ಕಾಗಿ ಕಾಂಗ್ರೆಸ್ ವಿತರಿಸುತ್ತಿರುವ ಗ್ಯಾರಂಟಿ ಕಾರ್ಡುಗಳಿಗೆ ಯಾವುದೇ ವಾರಂಟಿ ಇಲ್ಲ ಎಂದು ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಉಡುಪಿ ಪುರಭವನದಲ್ಲಿ ನಡೆದ ಚುನಾವಣಾ ನಿರ್ವಹಣಾ ಸಮಿತಿಯ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಜಾರಿಗೆ ತಂದಿರುವ ಭಾಗ್ಯಲಕ್ಷ್ಮೀ, ಸಂಧ್ಯಾ ಸುರಕ್ಷಾ ಮುಂತಾದ ಜನಪರ ಯೋಜನೆಗಳಿಗೆ ಯಾವುದೇ ಗ್ಯಾರಂಟಿ ಕಾರ್ಡ್ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ಕೇಂದ್ರದಿಂದ ರೂ.6,000/- ರಾಜ್ಯದಿಂದ ರೂ.4,000/- ನೇರ ನಗದು ವರ್ಗಾವಣೆ ಮಾಡುತ್ತಿರುವ ಬಗ್ಗೆ ಯಾವುದೇ ಗ್ಯಾರಂಟಿ ಕಾರ್ಡ್ ನೀಡಿಲ್ಲ. ಈ ಎಲ್ಲಾ ವಿಚಾರಗಳನ್ನು ಬಿಜೆಪಿ ಕಾರ್ಯಕರ್ತರು ಜನತೆಗೆ ಮನವರಿಕೆ ಮಾಡಬೇಕಾದ ಅವಶ್ಯಕತೆ ಇದೆ. ಈಡೇರಿಸಲು ಸಾಧ್ಯವಿಲ್ಲದ, ಕಾಂಗ್ರೆಸ್ಸಿನ ವಾರಂಟಿ ಇಲ್ಲದ ಗ್ಯಾರಂಟಿ ಕಾರ್ಡಿನ ವಾಸ್ತವಿಕತೆಯ ಬಗ್ಗೆ ಪಕ್ಷದ ಕಾರ್ಯಕರ್ತರು ಜನಮಾನಸದಲ್ಲಿ ಅರಿವು ಮೂಡಿಸಬೇಕು ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಎಸ್.ಸಿ., ಎಸ್.ಟಿ. ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿರುವ ಜೊತೆಗೆ ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಜಾರಿಗೆ ತಂದಿರುವ ಒಳ ಮೀಸಲಾತಿಯಿಂದ ಬಡವರ ಮಕ್ಕಳು ಕೂಡಾ ಉನ್ನತ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ನಾಂದಿ ಹಾಡಿರುವುದು ಸರಕಾರದ ಸಾಮಾಜಿಕ ನ್ಯಾಯದ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.

ವಿಧಾನಸಭಾ ಚುನಾವಣೆಯ ನಿರ್ವಹಣೆಗಾಗಿ ಬಿಜೆಪಿ ರಾಜ್ಯಾಧ್ಯಕ್ಷರು, ಕೇಂದ್ರ ಸಚಿವರು, ಕೇಂದ್ರದ ನಾಯಕತ್ವ ಹಾಗೂ ಮಾರ್ಗದರ್ಶನದಲ್ಲಿ ಚುನಾವಣಾ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ. ಸುಮಾರು 24 ಉಪ ಸಮಿತಿಗಳ ಮೂಲಕ ಜವಾಬ್ದಾರಿಯ ಹಂಚಿಕೆ ಮಾಡಲಾಗಿದೆ. ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರವಾರು ಸಮಿತಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಒಂದು ತಂಡವಾಗಿ ಕೆಲಸ ಮಾಡಬೇಕಾಗಿದೆ ಎಂದರು.

ಚುನಾವಣಾ ಪೂರ್ವ ಸಮೀಕ್ಷೆಗಳ ನಿಖರ ಅಂಕಿ ಅಂಶಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ನಿಶ್ಚಿತವಾಗಿ ಅಧಿಕಾರಕ್ಕೆ ಬರಲಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಪಕ್ಷದ ಬೂತ್, ಶಕ್ತಿಕೇಂದ್ರ, ಮಹಾ ಶಕ್ತಿಕೇಂದ್ರ, ಮಂಡಲ, ಪ್ರಕೋಷ್ಠ, ಮೋರ್ಚಾ ಹಾಗೂ ಜಿಲ್ಲಾ ಸಹಿತ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತ ಬಂಧುಗಳು ಪಕ್ಷದ ಯೋಚನೆ ಯೋಜನೆ ಹಾಗೂ ಸರಕಾರದ ಸಾಧನೆಗಳನ್ನು ಮತದಾರರಿಗೆ ತಲುಪಿಸಿ, ಮಗದೊಮ್ಮೆ ಜಿಲ್ಲೆಯ ಐದೂ ಸ್ಥಾನಗಳ ಗೆಲುವಿಗೆ ಬದ್ಧತೆಯಿಂದ ಶ್ರಮಿಸಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಸ್ತಾವಿಕವಾಗಿ ಮಾತನಾಡಿ, ಉಡುಪಿ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರವಾರು ಚುನಾವಣಾ ನಿರ್ವಹಣಾ ಸಮಿತಿಯ ಉತ್ತಮ ತಂಡ ರಚನೆಯಾಗಿದೆ. ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ನೀಡುವ ಮಾರ್ಗದರ್ಶನದಂತೆ ತಮ್ಮ ಕ್ಷೇತ್ರದಲ್ಲಿ ಬದ್ಧತೆಯಿಂದ ತೊಡಗಿಸಿಕೊಳ್ಳಬೇಕು. ಚುನಾವಣೆಯ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ಎಲ್ಲರೂ ತಮ್ಮ ಗುರುತರವಾದ ಜವಾಬ್ದಾರಿಯನ್ನು ಅರಿತು ಸಂಘಟಿತ ಪ್ರಯತ್ನದ ಮೂಲಕ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ದೊಡ್ಡ ಅಂತರದ ಗೆಲುವಿಗೆ ಶ್ರಮಿಸಿ, ರಾಜ್ಯಕ್ಕೆ ಕೊಡುಗೆ ನೀಡಬೇಕು ಎಂದರು.

ಉಡುಪಿ ಜಿಲ್ಲೆ ಹಾಗೂ ಉಡುಪಿ, ಕಾರ್ಕಳ, ಕಾಪು, ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ನಿರ್ವಹಣಾ ಸಮಿತಿಯ ವಿವಿಧ 24 ವಿಭಾಗಗಳ ಪ್ರತ್ಯೇಕ ಸಭೆಗಳನ್ನು ಆಯೋಜಿಸಲಾಯಿತು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ರವರು ಸಮಾರೋಪ ಸಭೆಯನ್ನುದ್ದೇಶಿಸಿ ಮಾತನಾಡಿ ಮಾರ್ಗದರ್ಶನ ನೀಡಿದರು.

ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಚುನಾವಣಾ ನಿರ್ವಹಣಾ ಸಮಿತಿಯ ಜಿಲ್ಲಾ ಸಂಚಾಲಕ ಮನೋಹರ್ ಎಸ್. ಕಲ್ಮಾಡಿ ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರಗಳ ಚುನಾವಣಾ ನಿರ್ವಹಣಾ ಸಮಿತಿಯ ತಂಡದ ವಿವಿಧ ವಿಭಾಗಗಳ ಸಂಚಾಲಕರು, ಸಹ ಸಂಚಾಲಕರು ಹಾಗೂ ಸದಸ್ಯರು ಭಾಗವಹಿಸಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ವಂದಿಸಿದರು.

Latest Indian news

Popular Stories