ಕಾಪು: ಶರತ್ ಶೆಟ್ಟಿ ಹತ್ಯಾ ಪ್ರಕರಣ – ಚುರುಕುಗೊಂಡ ತನಿಖೆ

ಕಾಪು, ಫೆ.7: ಇಲ್ಲಿಗೆ ಸಮೀಪದ ಪಾಂಗಾಳದಲ್ಲಿ ಶರತ್ ಶೆಟ್ಟಿಯನ್ನು ಚರ್ಚೆ ಮಾಡುವ ನೆಪದಲ್ಲಿ ಕರೆಸಿ ಚಾಕುವಿನಿಂದ ಇರಿದು ಹತ್ಯೆಗೈದ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.

ಗುತ್ತಿಗೆ, ಭೂ ವ್ಯವಹಾರ ಸೇರಿದಂತೆ ನಾನಾ ಕಾಮಗಾರಿಗಳನ್ನು ಮಾಡುತ್ತಿದ್ದ ಶರತ್ ಶೆಟ್ಟಿ ಅವರ ಮೊಬೈಲ್ ಸಂಖ್ಯೆಗೆ ಅಪರಿಚಿತರು ಕರೆ ಮಾಡಿದ್ದರು.

ಮೃತ ಶರತ್ ಶೆಟ್ಟಿ ಹಿನ್ನೆಲೆಯ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಎರಡು ತಿಂಗಳ ಹಿಂದೆ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳದ ಬಗ್ಗೆ ತನಿಖೆ ತೀವ್ರಗೊಳಿಸಿದ್ದಾರೆ. ಜಗಳದಲ್ಲಿ ತೊಡಗಿದ್ದವರ ಸುತ್ತ ನಿಗಾ ಹೆಚ್ಚಿಸಿದ್ದಾರೆ. ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಪಕ್ಕದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಬೈಕ್‌ನಲ್ಲಿ ಮೂವರು ಚಾಕುಗಳನ್ನು ಹಿಡಿದುಕೊಂಡು ಹೋಗುತ್ತಿರುವುದು ಹಾಗೂ ಒಬ್ಬರು ನಡೆದುಕೊಂಡು ಹೋಗುತ್ತಿರುವುದು ದಾಖಲಾಗಿದೆ. ಶ್ವಾನದಳದ ನಾಯಿ ಕೂಡ ಆಲಡೆ ರಸ್ತೆಯವರೆಗೂ ಓಡಿ ಹಿಂತಿರುಗಿತು. ಕೃತ್ಯದಲ್ಲಿ ನಾಲ್ವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಸೋಮವಾರ ಸಂಜೆ ಶರತ್ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಯ ನಂತರ ಅವರ ಮನೆಗೆ ತಂದು ನೂರಾರು ಜನರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಸಲಾಯಿತು.

Latest Indian news

Popular Stories