ಕಾರ್ಕಳದಲ್ಲಿ ಆಪ್ಟಿಕಲ್ ಫೈಬರ್ ಪರ್ಫಾಮ್ ಉತ್ಪಾದನಾ ಘಟಕ ತೆರೆಯಲು ಬಿರ್ಲಾ ಸಂಸ್ಥೆ ತಾತ್ವಿಕ ಒಪ್ಪಿಗೆ – ಸುನೀಲ್ ಕುಮಾರ್

ಕಾರ್ಕಳದಲ್ಲಿ ಆಪ್ಟಿಕಲ್ ಫೈಬರ್ ಪರ್ಫಾಮ್ ಉತ್ಪಾದನಾ ಘಟಕ ತೆರೆಯುವುದಕ್ಕೆ ಬಿರ್ಲಾ ಪುರುಕಾವ ಫೈಬರ್ ಆಪ್ಟಿಕ್ಸ್ ಪ್ರೈವೇಟ್ ಸಂಸ್ಥೆ ತಾತ್ವಿಕ ಒಪ್ಪಿಗೆ ನೀಡಿದ್ದು, ಈ ಸಂಬಂಧ ಸಂಸ್ಥೆ ಅಧಿಕಾರಿಗಳ ಜತೆಗೆ ಮಹತ್ವದ ಸಭೆ ನಡೆಸಲಾಗಿದೆ ಎಂದು ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ತಿಳಿಸಿದ್ದಾರೆ.

ಸುಮಾರು ೩೦೦೦ ಕೋಟಿ ರೂ.ವೆಚ್ಚದಲ್ಲಿ ಈ ಘಟಕ ಸ್ಥಾಪನೆ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಪಿಲ್ ಮೆಹ್ತಾ ಹಾಗೂ ಯುನಿವರ್ಸಲ್ ಕೇಬಲ್ ನ ಮುಖ್ಯಕಾರ್ಯ ನಿರ್ವಹಣಾಧಿಕಾರಿ ವೈ.ಎಸ್. ಲೋಧಾ ಜತೆ ಚರ್ಚೆ ನಡೆಸಿದ್ದೇನೆ. ಇದರಿಂದ ಸುಮಾರು ೧೫೦೦ ಜನರಿಗೆ ಉದ್ಯೋಗ ಲಭಿಸುತ್ತದೆ ಎಂದು ಹೇಳಿದ್ದಾರೆ.


ನಿಯಮಾವಳಿ ಪ್ರಕಾರ ಸರ್ಕಾರದಿಂದ ಅನುಮತಿ ಪಡೆದ ಬಳಿಕ ಸುಮಾರು ೩೦೦೦ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ. ಮುಂದಿನ ಹದಿನೈದು ದಿನಗಳಲ್ಲಿ ಸ್ಥಳ ಪರಿಶೀಲನಾ ಕಾರ್ಯ ನಡೆಸಲು ಸಂಸ್ಥೆ ಒಪ್ಪಿಗೆ ನೀಡಿದ್ದು ಸಂಸ್ಥೆಯ ಅಧಿಕಾರಿಗಳ ತಂಡ ಸದ್ಯದಲ್ಲೇ ಆಗಮಿಸಲಿದೆ ಎಂದು ಹೇಳಿದರು.

ಟೆಲಿಕಮ್ಯನಿಕೇಷನ್ ತರಂಗಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರವಾನಿಸಲು ಆಫ್ಟಿಕಲ್ ಫೈಬರ್ ಕೇಬಲ್ ಗಳಿಗೆ ಅಗತ್ಯವಾದ ಫರ್ಫಾರ್ಮಾ ಸೆಲಿಕಾ ಉತ್ಪಾದನೆಯನ್ನು ಈ ಘಟಕದಲ್ಲಿ ಮಾಡಲಾಗುತ್ತದೆ. ೪ ಜಿ ಮತ್ತು ೫ ಜಿ ಟೆಲಿ ಕಮ್ಯುನಿಕೇಷನ್ ಗಳಲ್ಲಿ ಇದು ಮೂಲಾಧಾರವಾಗಿದೆ.ಕಾರ್ಕಳದಲ್ಲಿ ಸುಮಾರು ೧ ಲಕ್ಷ ಚದರ ಅಡಿ ಜಾಗದಲ್ಲಿ ಎರಡು ಹಂತದಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ.

Latest Indian news

Popular Stories