ಉಡುಪಿ, ಫೆ.17: ಕೆಮ್ಮಣ್ಣು ಸಂತೆ ಮಾರುಕಟ್ಟೆ ಬಳಿ ಗೂಡ್ಸ್ ಟೆಂಪೊದಿಂದ ವ್ಯಕ್ತಿಯೊಬ್ಬರನ್ನು ಎಸೆದು ಹೋದ ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಂದು ಉಡುಪಿ ಎಸ್ಪಿ ಅಕ್ಷಯ್ ಹಾಕೇ ಮಚ್ಚೀಂದ್ರ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಪರೀತ ಕುಡಿದು ಟೆಂಪೊದಲ್ಲಿ ಮಲಗಿದ್ದ ಹನುಮಂತ ಏಳದ ಕಾರಣ, ಅವರನ್ನು ಬಸಿಯಾ ಹಾಗೂ ಚಾಲಕ ಮಂಜುನಾಥ ಕೆಮ್ಮಣ್ಣು ರಸ್ತೆ ಬದಿ ಇಳಿಸಿ ಹೋಗಿದ್ದರು. ಅವರು ವಿಪರೀತ ಕುಡಿದಿರುವುದರಿಂದ ಹನುಮಂತನ ದೇಹ ಅಲುಗಾಡುತ್ತಿರಲಿಲ್ಲ. ಇದರಿಂದ ಹನುಮಂತನನ್ನು ಸಾಯಿಸಿ ಎಸೆದು ಹೋಗಿ ದ್ದಾರೆ ಎಂದು ಜನ ಹೇಳಿಕೊಳ್ಳುತ್ತಿದ್ದರು. ಆದರೆ ಸಿಸಿಟಿವಿ ಪರಿಶೀಲನೆ ನಡೆಸಿ ದಾಗ ಹನುಮಂತ ಜೀವಂತ ಇರುವುದು ಕಂಡುಬಂದಿದೆ ಎಂದರು.
ಮೃತದೇಹದ ಮೈಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ. ಇವರ ಮಧ್ಯೆ ಯಾವುದೇ ಗಲಾಟೆ ಕೂಡ ನಡೆದಿಲ್ಲ ಎಂಬುದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಮೇಲ್ನೋಟಕ್ಕೆ ಇದು ಕೊಲೆ ಎಂಬುದು ಕಂಡುಬಂದಿಲ್ಲ. ಮರಣೋತ್ತರ ಪರೀಕ್ಷೆಯಿಂದ ಎಲ್ಲ ಸಾವಿನ ಕಾರಣ ತಿಳಿದು ಬರಲಿದೆ ಎಂದು ಅವರು ಹೇಳಿದರು