ಕೇಂದ್ರ ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಕೈ ಪ್ರತಿಭಟನೆ

ವಿಜಯಪುರ : ಕೇಂದ್ರ ಸರ್ಕಾರದ ಜನವಿರೋಧಿ, ದ್ವೇಷ ರಾಜಕೀಯ, ಮಲತಾಯಿ ಧೋರಣೆಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಡಾ.ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದ ಜನತೆಗೆ 5 ಜನಪರ ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಹೇಳಿತ್ತು. ಅದರಲ್ಲಿ ಅನ್ನಭಾಗ್ಯ ಯೋಜನೆಯೂ ಒಂದು. ರಾಜ್ಯ ಹಸಿವು ಮುಕ್ತವಾಗಬೇಕೆಂಬ ಒಳ್ಳೆಯ ಉದ್ದೇಶದಿಂದ ಬಡವರಿಗೆ ತಲಾ 10 ಕೆಜಿ ಅಕ್ಕಿ ಉಚಿತವಾಗಿ ನೀಡವ ಅನ್ನಭಾಗ್ಯ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿದೆ. ಆದರೆ ಕೇಂದ್ರ ಸರ್ಕಾರ ಸಾಕಷ್ಟು ದಾಸ್ತಾನು ಇದ್ದರೂ ಸಹಿತ ಕರ್ನಾಟಕ ಸರ್ಕಾರಕ್ಕೆ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ಹೇಳಿರುವುದು ಅತ್ಯಂತ ಖಂಡನೀಯ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಬಡವರಿಗೆ ಹಂಚಲು ಅಕ್ಕಿ ಪಡೆಯಲು ಕೇಂದ್ರ ಆಹಾರ ಇಲಾಖೆಯಿಂದ ಭರವಸೆಯ ಪತ್ರವನ್ನು ಪಡೆದಿತ್ತು. ಆದರೆ ಕೇಂದ್ರ ಬಿಜೆಪಿ ಸರ್ಕಾರವು ಇದಕ್ಕೆ ಅಡ್ಡಗಾಲು ಹಾಕಿದೆ. ಕೊಟ್ಟ ಭರವಸೆಯನ್ನು ಒಂದೇ ದಿನದಲ್ಲಿ ಹಿಂಪಡೆದು ದ್ವೇಷ ರಾಜಕಾರಣ ಬಿಜೆಪಿ ಶುರು ಹಚ್ಚಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯದಲ್ಲಿ ಹೀನಾಯ ಸೋಲು ಕಂಡು ಕಂಗಾಲಾದ ಬಿಜೆಪಿ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಮತ್ತೋಮ್ಮೆ ಸೂಲುವುದು ಖಚಿತವಾಗಿದೆ. ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮುಳುವಾಗಲಿವೆ ಎನ್ನುವ ದುರುದ್ದೇಶದಿಂದ ಕಾಂಗ್ರೆಸ್ ಸರ್ಕಾರದ ಯೋಜನೆಗಳಿಗೆ ಅಡತಡೆಯನ್ನುಂಟು ಮಾಡುತ್ತಿರುವುದನ್ನು ರಾಜ್ಯದ ಜನ ಅರ್ಥ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ತನ್ನ ದ್ವೇಷ ರಾಜಕಾರಣವನ್ನು ಬದಿಗಿಟ್ಟು ಜನ ಹಿತಕ್ಕಾಗಿ ರಾಜ್ಯ ಸರ್ಕಾರಕ್ಕೆ ಅಕ್ಕಿ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ, ಪ್ರಚಾರ ಸಮಿತಿ ಸಂಚಾಲಕ ಸಂಗಮೇಶ ಬಬಲೇಶ್ವರ, ಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ (ಯಾಳಗಿ), ಎಸ್.ಸಿ. ಘಟಕದ ಜಿಲ್ಲಾ ಅಧ್ಯಕ್ಷ ರಮೇಶ ಗುಬ್ಬೇವಾಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ಮಹಾದೇವಿ ಗೋಕಾಕ, ಕೆಪಿಸಿಸಿ ವೈದ್ಯಕೀಯ ವಿಭಾಗದ ಪ್ರಧಾನ ಕಾರ್ಯದರ್ಶಿ ಡಾ.ರವಿ ಬಿರಾದಾರ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಬ್ಬೀರ ಜಾಗೀರದಾರ, ಎನ್ಎಸ್ಯುಐ ಜಿಲ್ಲಾ ಅಧ್ಯಕ್ಷ ಅಮಿತ ಚವ್ಹಾಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐ.ಎಂ.ಇಂಡಿಕರ, ಜಿಲ್ಲಾ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಡಾ.ಗಂಗಾಧರ ಸಂಬಣ್ಣಿ, ಆಜಾದ ಪಟೇಲ, ಬ್ಲಾಕ್ ಅಧ್ಯಕ್ಷರುಗಳಾದ ಜಮೀರಅಹ್ಮದ ಬಕ್ಷಿ, ಆರತಿ ಶಹಾಪೂರ, ಸುರೇಶ ಹಾರಿವಾಳ, ಗುರು ತಾರನಾಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Latest Indian news

Popular Stories