ಉಡುಪಿ, ಜ.24: ಕೋಡಿಬೆಂಗ್ರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಶಿಕ್ಷಕರೊಬ್ಬರನ್ನು ವರ್ಗಾವಣೆಗೊಳಿಸುವ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ವಿರೋಧಿಸಿ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರು ಇಂದು ಕೌನ್ಸಿಲಿಂಗ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ನಡೆಯುತ್ತಿದ್ದ ಉಡುಪಿ ಸರಕಾರಿ ಬಾಲಕಿಯರ ಕಾಲೇಜಿನ ಆವರಣ ದಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಮುಂದೆ ಸೇರಿದ ಪ್ರತಿಭಟನಕಾರರು ಶಿಕ್ಷಕರ ವರ್ಗಾವಣೆ ಕೈಬಿಡುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಮತ್ತು ಪ್ರತಿಭಟನಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಬಳಿಕ ಸ್ಥಳಕ್ಕೆ ಆಗಮಿಸಿದ ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಡಿ.ಆರ್.ಮಂಜಪ್ಪ ಪ್ರತಿಭಟನಕಾರರನ್ನು ಸಮಾಧಾನ ಪಡಿಸಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ತಿಳಿಸಿದರು. ಆದರೆ ಪೊಲೀಸರ ವರ್ತನೆ ವಿರುದ್ಧ ಪ್ರತಿಭಟನಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
‘2020ರ ಕೊರೋನಾ ಸಂದರ್ಭದಲ್ಲಿ ನಮ್ಮ ಶಾಲೆಯಲ್ಲಿ ಕೇವಲ 20 ಮಕ್ಕಳಿ ದ್ದರು. ಮುಚ್ಚುವ ಪರಿಸ್ಥಿತಿಯಲ್ಲಿದ್ದ ಶಾಲೆಯನ್ನು ಉಳಿಸಲು ಗ್ರಾಮಸ್ಥರು ಒಂದಾಗಿ ಶ್ರಮಿಸಿದ್ದೆವು. ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ತೆಗೆದು ಇಲ್ಲಿಗೆ ಸೇರಿಸಿದ್ದೇವು. ಇದೀಗ ಇಲ್ಲಿದ್ದ ಮೂವರು ಶಿಕ್ಷಕರಲ್ಲಿ ಒಬ್ಬರನ್ನು ವರ್ಗಾವಣೆ ಮಾಡುತ್ತಿದ್ದಾರೆ. ಇದು ಮಕ್ಕಳ ಶಿಕ್ಷಣ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಮುಂದೆ ಈ ಶಾಲೆಗೆ ಮಕ್ಕಳು ಸೇರ್ಪಡೆ ಆಗುವುದು ಕೂಡ ಕಡಿಮೆ ಆಗುತ್ತದೆ. ಕ್ರಮೇಣ ಶಾಲೆ ಮುಚ್ಚುವ ಪರಿಸ್ಥಿತಿ ಬರುತ್ತದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಆದುದರಿಂದ ರಾಜ್ಯ ಸರಕಾರ ಹಾಗೂ ಶಿಕ್ಷಣ ಇಲಾಖೆ ಇತ್ತ ಗಮನ ಹರಿಸಿ, ಈ ಸರಕಾರಿ ಶಾಲೆಯನ್ನು ಉಳಿಸುವಂತೆ ಮಾಡಬೇಕು. ಅಲ್ಲದೆ ಶಿಕ್ಷಕರ ವರ್ಗಾವಣೆಗೆ ಇರುವ ನಿಯಮಗಳನ್ನು ಬದಲಾವಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ನಿರ್ದೇಶಕರುಗಳಾದ ನಾಗರಾಜ ಕುಂದರ್, ಮನೋಹರ್ ಕುಂದರ್, ರಮೇಶ್ ತಿಂಗಳಾಯ, ಪ್ರಶಾಂತ್ ಕಾಂಚನ್, ಸ್ಥಳೀಯ ಗ್ರಾಪಂ ಸದಸ್ಯರಾದ ಪ್ರಸಾದ್ ತಿಂಗಳಾಯ, ವಿನಯ ಅಮೀನ್, ಎಸ್ಡಿಎಂಸಿ ಅಧ್ಯಕ್ಷ ರವೀಂದ್ರ ಶ್ರೀಯಾನ್ ಉಪಾಧ್ಯಕ್ಷ ಚಂದ್ರ ಬಂಗೇರ ಮೊದಲಾದವರು ಉಪಸ್ಥಿತರಿದ್ದರು