ಚಂದ್ರಯಾನ-3 | ಯಶಸ್ಸಿನಲ್ಲಿ ಕರಾವಳಿಯ ವಿಜ್ಞಾನಿಗಳು

ಚಂದ್ರಯಾನ -3ರ ಯಶಸ್ಸಿನ ಹಿಂದೆ ದೇಶದ ನೂರಾರು ವಿಜ್ಞಾನಿಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಉಡುಪಿ ಜಿಲ್ಲೆಯ ಇನ್ನಿಬ್ಬರು ಸಾಧಕ ವಿಜ್ಞಾನಿಗಳ ವಿವರ ಇಲ್ಲಿದೆ.

ಎಲ್ಲೂರಿನ ಉಷಾ ದಿನೇಶ್‌ ಶಾಸ್ತ್ರಿ

ಉಡುಪಿ: ಮೂಲತಃ ಕಾಪುವಿನ ಎಲ್ಲೂರಿನವರಾದ ಉಷಾ ದಿನೇಶ್‌ ಶಾಸ್ತ್ರಿ ಅವರು ಇಸ್ರೋದಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿ 2022ರಲ್ಲಿ ನಿವೃತ್ತರಾದರೂ ಚಂದ್ರಯಾನ 3ರಲ್ಲಿ ಕೆಲಸ ಮಾಡಿದ್ದರು. ಥರ್ಮಲ್‌ ಟೆಸ್ಟಿಂಗ್‌ ಡಿವಿಷನ್‌ನ ಮುಖ್ಯಸ್ಥರಾಗಿದ್ದರು. ಸ್ಯಾಟಲೈಟ್‌ ತಯಾರಾದ ಬಳಿಕ ಅದನ್ನು ಇವರ ಮುಂದಾಳತ್ವದಲ್ಲಿ ತಪಾಸಣೆ ಮಾಡಲಾಗುತ್ತಿತ್ತು. ಇಸ್ರೋ ಸೇರುವ ಮುನ್ನ ಬೆಂಗಳೂರಿನಲ್ಲಿ ಉಪನ್ಯಾಸಕರಾಗಿದ್ದರು. ತಂದೆ ಪಿಡಬ್ಲ್ಯುಡಿ ಎಂಜಿನಿಯರ್‌ ಆದ ಕಾರಣ ಧಾರವಾಡ, ಬೆಳಗಾವಿ, ಬೆಂಗಳೂರು, ಗುಲ್ಬರ್ಗ ಹೀಗೆ ರಾಜ್ಯಾದ್ಯಂತ ಇವರ ವಿದ್ಯಾಭ್ಯಾಸ ನಡೆದಿತ್ತು. ಪ್ರಸ್ತುತ ಇವರು ತಂದೆ, ತಾಯಿ ಹಾಗೂ ಪತಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಉದ್ಯಾವರದ ವೆಂಕಟ ರಾಘವೇಂದ್ರ

ಉಡುಪಿ: ವೆಂಕಟ ರಾಘವೇಂದ್ರ ಅವರು ಉದ್ಯಾವರದ ಶಂಭುಕಲ್ಲಿನವರು. ಚಂದ್ರ ಯಾನ 3ರಲ್ಲಿ ಡೆಪ್ಯೂಟಿ ಪ್ರಾಜೆಕ್ಟ್ ಡೈರೆಕ್ಟರ್‌ ಹಾಗೂ ಅಡ್ವಾನ್ಸ್ಡ್ ಥರ್ಮಲ್‌ ಕಂಟ್ರೋಲ್‌ ಡಿವಿಷನ್‌ನ ಮುಖ್ಯಸ್ಥರಾಗಿದ್ದಾರೆ. ‌

ಬೆಂಗಳೂರಿನ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿ ನಲ್ಲಿ ಎಂಜಿನಿಯರಿಂಗ್‌ ಮಾಡಿದ ಇವರು ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಎಂ.ಟೆಕ್‌ ಮಾಡಿದ್ದಾರೆ. ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ನಲ್ಲಿ ಪಿಎಚ್‌.ಡಿ ಮಾಡಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಕುದಿ ಗ್ರಾಮದ ಇನ್ನಂಜೆ ಹಾಗೂ ಶಂಕರಪುರದಲ್ಲಿ ಪೂರೈಸಿದ್ದಾರೆ. ಚಂದ್ರಯಾನ 2 ರಲ್ಲಿಯೂ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ. ಒಟ್ಟು 26 ವರ್ಷಗಳಿಂದಲೂ ಇಸ್ರೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಉದ್ಯಾವರದಲ್ಲಿ ಅವರ ತಾಯಿ, ಸಹೋದರ ಸಹಿತ ಕುಟುಂಬಸ್ಥರು ವಾಸವಾಗಿದ್ದಾರೆ.

Latest Indian news

Popular Stories