ಇಂದು ನಮ್ಮ ಮುಂದೆ ಅಂಬೇಡ್ಕರ್ ಕನಸಿನ ಭಾರತದ ಬದಲು ಮೃಗೀಯ ಭಾರತ ಇದೆ. ಯಾವುದೇ ಪ್ರಾಣಿಗಳು ತನ್ನ ಸಮುದಾಯದ ಪ್ರಾಣಿಗಳನ್ನು ಎಂದು ಕೂಡ ಕೊಲ್ಲುವುದಿಲ್ಲ. ಆದರೆ ಮನುಷ್ಯ ಮನುಷ್ಯನನ್ನೇ ಹಾಡು ಹಗಲಿನಲ್ಲಿಯೇ ಕೊಲ್ಲುತ್ತಿದ್ದಾರೆ. ಇದು ಅಂಬೇಡ್ಕರ್ ಭಾರತ ಅಲ್ಲ ಎಂದು ಮೈಸೂರು ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ ಉಡುಪಿ ಜಿಲ್ಲೆ ಇದರ ವತಿಯಿಂದ ಜಿಲ್ಲೆಯ ಸಮಸ್ತ ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ 132ನೇ ಜನ್ಮ ದಿನಾಚರಣೆ ಪ್ರಯುಕ್ತ ಇಂದು ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆದ ‘ಭಾರತ ಭಾಗ್ಯವಿಧಾತ’ ಶೋಷಿತ ಸಮುದಾಯಗಳ ಸಾಂಸ್ಕೃತಿಕ ಮಹಾಜಾಥ ಮತ್ತು ಶೈಕ್ಷಣಿಕ ಪ್ರೋತ್ಸಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ನಕಲಿ, ಅಸಲಿ ಮತ್ತು ಸೀಜನ್ ಎಂಬ ಮೂರು ರೀತಿಯ ಅಂಬೇಡ್ಕರ್ ವಾದಿಗಳಿದ್ದಾರೆ. ಇದರಲ್ಲಿ ಸೀಜನ್ ಮತ್ತು ನಕಲಿ ಅಂಬೇಡ್ಕರ್‌ವಾದಿಗಳಿಂದ ದೇಶಕ್ಕೆ ಗಂಡಾಂತರ ಇದೆ. ಅಂಬೇಡ್ಕರ್ ಇಲ್ಲದ ಭಾರತ ಶೂನ್ಯ. ನಮಗೆ ಧರ್ಮಕ್ಕಿಂತ ದೇಶ ಮುಖ್ಯವಾಗಬೇಕು. ಅಂಬೇಡ್ಕರ್ ನೀಡಿರುವ ಮತದಾನದ ಹಕ್ಕಿನಿಂದ ಮಾತ್ರ ಈ ದೇಶವನ್ನು ಬದಲಾಯಿಸಲು ಸಾಧ್ಯ ಎಂದರು.
ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೇ ಎಂಬುದಾಗಿ ನಾವು ಪ್ರಶ್ನೆ ಮಾಡ ಬೇಕಾಗಿದೆ. ಯಾಕೆಂದರೆ ಈ ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಯ ಆಸ್ತಿಯ ಲಾಭ 1348ಕೋಟಿ. ಇದು ಪ್ರಜಾಪ್ರಭುತ್ವ ಆಗಲು ಸಾಧ್ಯವೇ. ಬಡವ ಮದತ್ತು ಶ್ರೀಮಂತ ಮಧ್ಯೆ ಆರ್ಥಿಕ ಅಂತರ ಮುಗಿಲು ಮುಟ್ಟಿದೆ. ಆ ನಿಟ್ಟಿನಲ್ಲಿ ಪ್ರಜಾ ಪ್ರಭುತ್ವವನ್ನು ಉಳಿಸುವ ಕಾರ್ಯ ಮಾಡಬೇಕಾಗಿದೆ. ನಾವು ಮತದಾನ ಮಾಡುವ ಮೂಲಕ ಈ ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಕಾಪಾಡಬೇಕು. ಮತವನ್ನು ಮಾರಾಟ ಮಾಡುವವರು ಅಂಬೇಡ್ಕರ್ ದ್ರೋಹಿ ಗಳು ಎಂದು ಅವರು ಟೀಕಿಸಿದರು.
ಅಂಬೇಡ್ಕರ್ ಸಂವಿಧಾನದಿಂದ ಆದಿವಾಸಿ ಮಹಿಳೆ ಕೂಡ ರಾಷ್ಟ್ರಪತಿಯಾಗುತ್ತಾರೆ. ಆದರೆ ಮನು ಸಂವಿಧಾನ ನಮ್ಮನ್ನು ಗುಲಾಮರನ್ನಾಗಿ ಮಾಡುತ್ತದೆ. ಆದುದರಿಂದ ಅಂಬೇಡ್ಕರ್ ಸಂವಿಧಾನ ಬೇಕಾದರೆ ಅರ್ಹರಿಗೆ ಮತ ಹಾಕಬೇಕು. ಈ ದೇಶದಲ್ಲಿ 37ಲಕ್ಷ ದಲಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶ್.42 ಮಕ್ಕಳು ಎಸೆಸೆಲ್ಸಿ ಪಿಯುಸಿ ಶಿಕ್ಷಣ ತೊರೆಯುತ್ತಿದ್ದಾರೆ. 5ಸಾವಿರ ಹೆಣ್ಣು ಮಕ್ಕಳು ದೇವದಾಸಿಗಳಾಗಿದ್ದಾರೆ. ಪ್ರತಿ ಆರು ನಿಮಿಷಕ್ಕೆ ಒಬ್ಬಳು ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆಯುತ್ತದೆ. ಪ್ರತಿ 8 ನಿಮಿಷಕ್ಕೆ ಒಂದು ಎಸ್‌ಸಿಎಸ್‌ಟಿಯ ಗುಡಿಸಲಿಗೆ ಬೆಂಕಿ ಬೀಳುತ್ತಿದೆ ಎಂದರು.
ಅಧ್ಯಕ್ಷತೆಯನ್ನು ಸಮಿತಿಯ ಪ್ರಧಾನ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ವಿತರಿಸಲಾಯಿತು. ಬೀದರ್ ಅಣದೂರ್ ಧಮ್ಮ ದರ್ಶನ ಭೂಮಿಯ ಭಂತೇ ವರಜ್ಯೋತಿ ಮಾತನಾಡಿದರು.
ಬಸವಾನಂದ ಸ್ವಾಮೀಜಿ, ಕರ್ನಾಟಕ ಜನಶಕ್ತಿಯ ಮಲ್ಲಿಗೆ ಸಿರಿಮನೆ, ಮೈಸೂರು ಮುಕ್ತ ವಿವಿಯ ಉಪನಿರ್ದೇಶಕ ಡಾ.ಕೆ.ಪಿ.ಮಹಾಲಿಂಗ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ಜಿ.ರಾಘವೇಂದ್ರ, ಚಿಂತಕ ಪ್ರೊ.ಫಣಿರಾಜ್, ಪ್ರಮೀಳಾ ಜತ್ತನ್ನ, ಇದ್ರೀಸ್ ಹೂಡೆ, ಸಮಿತಿಯ ಜಿಲ್ಲಾ ಸಂಚಾಲಕರುಗಳಾದ ಜಯನ್ ಮಲ್ಪೆ, ಸುಂದರ್ ಮಾಸ್ತರ್, ಶ್ಯಾಮ್‌ರಾಜ್ ಬಿರ್ತಿ, ಶೇಖರ್ ಹೆಜಮಾಡಿ, ವಾಸುದೇವ ಮುದೂರು, ಹರೀಶ್ ಸಾಲ್ಯಾನ್ ಮಲ್ಪೆ, ವಿಶ್ವನಾಥ ಬೆಳ್ಳಂಪಳ್ಳಿ, ಪರಮೇಶ್ವರ ಉಪ್ಪೂರು, ರಮೇಶ್ ಕೋಟ್ಯಾನ್, ಆನಂದ ಬ್ರಹ್ಮಾವರ ಉಪಸ್ಥಿತರಿದ್ದರು.
ರಾಜ್ಯ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಎಸ್.ಎಸ್.ಪ್ರಸಾದ್ ಮತ್ತು ಅಂಬೇಡ್ಕರ್ ಯುವ ಸೇನೆಯ ಭಗವಾನ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಬೋರ್ಡ್ ಹೈಸ್ಕೂಲ್‌ನಿಂದ ಸಭಾಂಗಣದವರೆಗೆ ಜಾಥ ನಡೆಯಿತು