ನಾಟಕಗಳು ಒಂದು ಪ್ರಬಲವಾದ ಮಾಧ್ಯಮ : ವಂ. ಸ್ಟ್ಯಾನಿ ಬಿ ಲೋಬೋ

ಉಡುಪಿ : ನಾಟಕಗಳಿಂದ ಸಭಿಕರಿಗೆ ಉತ್ತಮ ಮೌಲ್ಯಗಳು ದೊರಕುತ್ತವೆ. ಉತ್ತಮ ನಾಟಕಗಳ ಮೂಲಕ ಜನರಿಗೆ ಉತ್ತಮ ಸಂದೇಶ ನೀಡಲು ಸಾಧ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ನಾಟಕ ಒಂದು ಪ್ರಬಲವಾದ ಮಾಧ್ಯಮ ಎಂದು ಉದ್ಯಾವರ ಸಂತ ಫ್ರಾನ್ಸಿಸ್ ಜೆವಿಯರ್ ದೇವಾಲಯದ ಪ್ರಧಾನ ಧರ್ಮ ಗುರು ವಂ. ಸ್ಟ್ಯಾನಿ ಬಿ ಲೋಬೋ ತಿಳಿಸಿದರು.

ಉದ್ಯಾವರ ದೇವಾಲಯದ ವಠಾರದಲ್ಲಿರುವ ಐಸಿವೈಎಂ ಸುವರ್ಣ ಮಹೋತ್ಸವ ಸ್ಮಾರಕ ವೇದಿಕೆಯಲ್ಲಿ ನಿರಂತರ್ ಉದ್ಯಾವರ ಸಂಘಟನೆಯ ಐದನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಏಳು ದಿನಗಳ ಕಾಲ ನಡೆಯುತ್ತಿರುವ ಬಹುಭಾಷಾ ನಿರಂತರ್ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ, ‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತ ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡುತ್ತಾ, ಏಳು ದಿನ ನಾಟಕ ಆಯೋಜನೆ ಮಾಡುವುದು ಅಷ್ಟು ಸುಲಭವಲ್ಲ. ಒಂದು ನಾಟಕದಿಂದ ಉತ್ತಮ ಸಂದೇಶ ದೊರಕಲು ಸಂಘಟಕರು ಬಹಳಷ್ಟು ಪ್ರಯತ್ನ ಪಡುತ್ತಾರೆ. ಅಂತಹ ಉತ್ತಮ ಸಾಹಸಕ್ಕೆ ನಿರಂತರ್ ಉದ್ಯಾವರ ಮುಂದಡಿ ಇಟ್ಟಿದೆ ಎಂದರು.

ಇದೇ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಜಯಕರ್ ಶೆಟ್ಟಿ ಇಂದ್ರಾಳಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ರಂಗ ನಿರ್ದೇಶಕ ನಾಗೇಶ್ ಕುಮಾರ್ ಉದ್ಯಾವರ, ದೇವಾಲಯದ ಪಾಲನ ಮಂಡಳಿ ಉಪಾಧ್ಯಕ್ಷ ಲಾರೆನ್ಸ್ ಡೆಸಾ, ನಿರಂತರ್ ಉದ್ಯಾವರ ಸಂಘಟನೆಯ ಅಧ್ಯಕ್ಷ ರೋಷನ್ ಕ್ರಾಸ್ತಾ ಕಾರ್ಯದರ್ಶಿ ಒಲಿವೀರ ಮಥಾಯಸ್ ಮತ್ತು ಸಂಚಾಲಕ ರೊನಾಲ್ಡ್ ಡಿಸೋಜ ಉಪಸ್ಥಿತರಿದ್ದರು.

ಮೈಕಲ್ ಡಿಸೋಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ಭೂಮಿಗೀತಾ ತಂಡದಿಂದ ‘ಹೇ ರಾಮ್’ ಎನ್ನುವ ತುಳು ನಾಟಕ ಪ್ರದರ್ಶನಗೊಂಡಿತು. 600ಕ್ಕೂ ಅಧಿಕ ಸಭಿಕರು ಪ್ರಥಮ ದಿನದ ನಾಟಕೋತ್ಸವ ವೀಕ್ಷಿಸಿದರು.

Latest Indian news

Popular Stories