ಪಡಲಿಖಾ ಸಂಸ್ಥೆಯಿಂದ 15 ಮಂದಿಗೆ 3ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ


ಉಡುಪಿ, ಜೂ.26: ಪಡಲಿಖಾ ಸಂಸ್ಥೆಯ ವತಿಯಿಂದ ಉಡುಪಿ ಜಿಲ್ಲೆಯ 15 ವಿದ್ಯಾರ್ಥಿಗಳಿಗೆ ತಲಾ 20ಸಾವಿರ ರೂ.ನಂತೆ ಒಟ್ಟು 3ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಶನಿವಾರ ಉಡುಪಿಯ ಮಣಿಪಾಲ ಇನ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.


ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಮಾತನಾಡಿ, ಶಿಕ್ಷಣ ಎಂಬುದು ಇಂದು ಪ್ರತಿಯೊಬ್ಬ ರಿಗೂ ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಆರ್ಥಿಕ ನೆರವು ನೀಡುವುದು ಶ್ಲಾಘನೀಯವಾಗಿದೆ. ಮುಂದೆ ಈ ವಿದ್ಯಾರ್ಥಿಗಳು ದೇಶದ ಆಸ್ತಿಯಾಗುವ ನಿಟ್ಟಿನಲ್ಲಿ ಸಾಧನೆ ಮಾಡಬೇಕು ಎಂದು ಹಾರೈಸಿದರು.


ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಮುಖ್ಯ ಟ್ರಾಫಿಕ್ ವಾರ್ಡನ್ ಪ್ರೊಫೆಸರ್ ಸುರೇಶನಾಥ್ ಮಾತನಾಡಿ, ಕೇವಲ ಶಿಕ್ಷಣದ ಪದವಿ ಪಡೆದರೆ ಸಾಲದು. ಅದರೊಂದಿಗೆ ಕೌಶಲ್ಯ ಮತ್ತು ಸಾಮರ್ಥ್ಯ ಕೂಡ ಮುಖ್ಯ. ಇವು ಇದ್ದರೆ ಮಾತ್ರ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ನಮ್ಮನ್ನು ಹುಡುಕಿಕೊಂಡು ಬರಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.


ಸಂಸ್ಥೆಯ ನಿರ್ದೇಶಕ ಸುಹೇಲ್ ಹುಸೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕುಮಾರ್ ವಿಟ್ಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

Latest Indian news

Popular Stories