ಪರ್ಯಾಯ ಮಹೋತ್ಸವ: ಉಡುಪಿ ಪೊಲೀಸ್ ಇಲಾಖೆಯಿಂದ ವಾಹನಗಳ ಸುಗಮ ಸಂಚಾರಕ್ಕೆ ಡಿಜಿಟಲ್ ಟ್ರಾಫಿಕ್ ವ್ಯವಸ್ಥೆ!

ಉಡುಪಿ: ಈ ಬಾರಿಯ ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ಉಡುಪಿ ನಗರದಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡಿ ಸುಗಮ ಸಂಚಾರ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾ ಯಿಂದ ಡಿಜಿಟಲ್ ಟ್ರಾಫಿಕ್ ಮತ್ತು ವೆಹಿಕಲ್ ಪಾರ್ಕಿಂಗ್ ಮೆನೇಜ್ಮೆಂಟ್ ವ್ಯವಸ್ಥೆಯನ್ನು ಅನುಷ್ಠಾನ ಮಾಡಲಾಗುತ್ತಿದೆ.

ಪರ್ಯಾಯ ಮಹೋತ್ಸವಕ್ಕಾಗಿ ಉಡುಪಿ ನಗರಕ್ಕೆ ಆಗಮಿಸಲಿರುವ ಭಕ್ತರ ಅನುಕೂಲಕ್ಕಾಗಿ ನಗರದ 25 ಕಡೆಗಳಲ್ಲಿ ಕ್ಯೂಆರ್ ಕೋಡ್ ಸ್ಕಾನರ್ಗಳನ್ನು ಅಳವಡಿಸಲಾಗುತ್ತಿದೆ. ಇದನ್ನು ಸ್ಕಾನ್ ಮಾಡುವುದರಿಂದ ಭಕ್ತರು ಶ್ರೀಕೃಷ್ಣ ಮಠಕ್ಕೆ ತಲುಪುವ ವಿವರಗಳು ಹಾಗೂ ಪಾರ್ಕಿಂಗ್ ಸ್ಥಳದ ಮಾಹಿತಿಗಳನ್ನು ಪಡೆಯಬಹುದಾಗಿದೆ.ಸ್ಕಾನರ್ಗಳನ್ನು ತಮ್ಮ ಮೊಬೈಲ್ಗಳಲ್ಲಿ ಸ್ಕಾನ್ ಮಾಡಿದಾಗ ಪರ್ಯಾಯ ಮಹೋತ್ಸವ ಸಂಬಂಧ ಈಗಾಗಲೇ ನಿಗದಿಪಡಿಸಿದ ವಿವಿಐಪಿ ಪಾರ್ಕಿಂಗ್, ವಿಐಪಿ ಪಾರ್ಕಿಂಗ್, ಕಾರು, ದ್ವಿಚಕ್ರ ವಾಹನ ಪಾರ್ಕಿಂಗ್ ಮಾಹಿತಿಗಳು ಫೋಟೋ ಸಮೇತ ದೊರೆಯಲಿದೆ.

ಅದೇ ರೀತಿ ನಗರದಲ್ಲಿನ ಪರ್ಯಾಯ ಮೆರವಣಿಗೆ ಮಾರ್ಗ, ಪೊಲೀಸ್ ಔಟ್ಪೋಸ್ಟ್, ಪೊಲೀಸ್ ಹೆಲ್ಪ್ಲೈನ್, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮೊಬೈಲ್ ಟಾಯ್ಲೆಟ್ಗಳು, ಸಾರ್ವಜನಿಕರಿಗೆ ಕಳ್ಳರ ಬಗ್ಗೆ ಎಚ್ಚರಿಕೆ ಕೊಡುವ ಪೊಲೀಸ್ ನೋಟೀಸ್ ಅಳವಡಿಸಿರುವ ಸ್ಥಳಗಳು, ಬ್ಯಾರಿಕೇಡ್ ಅಳವಡಿಸಿರುವ ಸ್ಥಳಗಳ ಸಂಪೂರ್ಣ ಮಾಹಿತಿ ಈ ವ್ಯವಸ್ಥೆಯಿಂದ ಪಡೆಯಬಹುದಾಗಿದೆ.

ಉಡುಪಿ ನಗರಕ್ಕೆ ಆಗಮಿಸುವ ಹೊರರಾಜ್ಯ ಹಾಗೂ ಜಿಲ್ಲೆಗಳ ಭಕ್ತರು ಸರಿಯಾದ ಮಾಹಿತಿ ಇಲ್ಲದೆ ನಗರದ ಒಳರಸ್ತೆಯಲ್ಲಿ ಆಗಮಿಸಿ ಟ್ರಾಫಿಕ್ ಸಮಸ್ಯೆಗೆ ಕಾರಣರಾಗುತ್ತಿದ್ದಾರೆ. ಇದನ್ನು ತಡೆಯಲು ಈ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಅಳವಡಿಸಿದೆ. ಕ್ಯೂಆರ್ ಕೋಡ್ ಸ್ಕಾನ್ ಮಾಡುವುದರ ಮೂಲಕ ಹೊರರಾಜ್ಯ ಹಾಗೂ ಜಿಲ್ಲೆಗಳ ಭಕ್ತರು ನಿಗದಿತ ಪ್ರದೇಶಕ್ಕೆ ಸುಲಭ ವಾಗಿ ತಲುಪಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ

Latest Indian news

Popular Stories