ಉಡುಪಿ : ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸೋಮವಾರ ಉಡುಪಿ ನಗರದಲ್ಲಿ ಬಿಜೆಪಿ ಅಧ್ಯರ್ಥಿ ಯಶ್ ಪಾಲ್ ಸುವರ್ಣ ಅವರ ಪರ ರೋಡ್ ಶೋ ನಡೆಸಿ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಸಭೆಯನ್ನುದ್ದೇಶಿಸಿ ಕನ್ನಡದಲ್ಲೇ ಮಾತನ್ನಾರಂಭಿಸಿದ ಶಿಂಧೆ ಅವರು ಎಲ್ಲರಿಗೂ ನನ್ನ ನಮಸ್ಕಾರಗಳು ಎಂದರು. ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಬಹಳ ಹಿಂದಿನಿಂದಲೂ ಸಂಬಂಧವಿದೆ. ಶಿವಾಜಿ ಮಾಹಾರಾಜರ ಕಾಲದಿಂದಲೂ ದೊಡ್ಡ ಬಾಂಧವ್ಯವಿದೆ. ಉಡುಪಿಯಲ್ಲಿ ಜನ್ಮಭೂಮಿ ಯಾದರೆ ಅನೇಕರಿಗೆ ಮುಂಬಯಿ ಕರ್ಮಭೂಮಿಯಾಗಿದ್ದು ವ್ಯಾಪಾರ, ವ್ಯವಹಾರ ಉದ್ಯೋಗಿಗಳಾಗಿದ್ದಾರೆ. ಕೋವಿಡ್ ಕಾಲದಲ್ಲಿ ಮಹಾರಾಷ್ಟ್ರದಲ್ಲಿ ಕನ್ನಡಿಗರು ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ ಎಂದರು.
ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಮೈತ್ರಿ ಸರಕಾರವಿದ್ದು ಇದೆ ಕಾರಣಕ್ಕೆ ನಾನು ಪ್ರಚಾರಕ್ಕೆ ಬಂದಿದ್ದೇನೆ ಎಂದರು. ಮಾಹಾರಾಷ್ಟ್ರದಲ್ಲಿ ಯಾವ ರಾಜಕೀಯ ಬದಲಾವಣೆ ಆಯಿತು ಎಂದು ತಾವೆಲ್ಲರೂ ತಿಳಿದಿದ್ದೀರಿ. ನಾವು ಬಾಳಾ ಸಾಹೇಬ್ ಠಾಕ್ರೆ ಅವರ ಹಿಂದುತ್ವದ ವಿಚಾರವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದರು.
ನರೇಂದ್ರ ಮೋದಿ ಅವರ ಸಹಕಾರದಿಂದ ಡಬಲ್ ಇಂಜಿನ್ ಸರಕಾರ ಕರ್ನಾಟಕದಂತೆ ಮಹಾರಾಷ್ಟ್ರದಲ್ಲೂ ಇದೆ ಎಂದರು. ವಿಕಾಸಕ್ಕಾಗಿ ನಾವು ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಮೋದಿ ಅವರಿಗೆ ಯಾವುದೇ ಯೋಜನೆಯ ಪ್ರಸ್ತಾವನೆ ಮಾಡಿದರೆ ಎಲ್ಲವೂ ಮಂಜೂರಾಗುತ್ತದೆ. ಕರ್ನಾಟಕದಲ್ಲೂ ವಿಕಾಸ ಆಗುತ್ತಿದೆ ಎಂದರು.