ಉಡುಪಿ, ಫೆ.7: ರಕ್ತದಾನ ಮಾಡುವುದರಿಂದ ಮನಸ್ಸಿಗೆ ಖುಷಿ ಸಿಗುತ್ತದೆ ಮತ್ತು ರಕ್ತದೊತ್ತಡ, ಮಧುಮೇಹದಂತಹ ಹಲವು ರೋಗಗಳು ನಿಯಂತ್ರಣಕ್ಕೆ ಬರುತ್ತದೆ. ಹಾಗಾಗಿ ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಉಡುಪಿ ಕರಾವಳಿ ಶಾಖೆಯ ಅಧ್ಯಕ್ಷ ಹಾಗೂ ಮನೋ ವೈದ್ಯ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.
ಉಡುಪಿ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್ ಮತ್ತು ಮಣಿಪಾಲ ಕೆಎಂಸಿಯ ಬ್ಲಡ್‌ಬ್ಯಾಂಕ್ ಸಹಯೋಗದಲ್ಲಿ ಉಡುಪಿ ಜಾಮೀಯ ಮಸೀದಿಯ ನೆಲಮಾಳಿಗೆಯಲ್ಲಿ ಏರ್ಪಡಿಸಲಾದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಭಾರತವು ಪ್ರತಿವರ್ಷ 41 ದಶಲಕ್ಷ ಯುನಿಟ್ ರಕ್ತದ ಕೊರತೆಯನ್ನು ಎದುರಿಸುತ್ತಿದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದ ಕಾರಣದಿಂದ ಪ್ರತಿವರ್ಷ ವಿವಿಧ ಕಾಯಿಲೆ ಬಳಲುತ್ತಿರುವ ರೋಗಿಗಳು, ಅಪಘಾತದ ಗಾಯಾಳುಗಳು ಸಾವನ್ನಪ್ಪುತ್ತಿದ್ದಾರೆ. ಈ ಜೀವಗಳನ್ನು ಉಳಿಸಲು ರಕ್ತದಾನಕ್ಕೆ ಹೆಚ್ಚಿನ ಪ್ರೋತ್ಸಾಹ ಅತೀಅಗತ್ಯ. ಅಲ್ಲದೆ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡ ಬೇಕು ಎಂದರು.
ಜನಸಾಮಾನ್ಯರಲ್ಲಿ ರಕ್ತದಾನದ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆ ಇರುವುದರಿಂದ ಅವರಿಗೆ ಅರಿವು ಮೂಡಿಸುವುದು ಅತೀ ಅಗತ್ಯವಾಗಿದೆ. ಹೆಚ್ಚು ಜನರು ಸೇರುವ ಧಾರ್ಮಿಕ ಕೇಂದ್ರಗಳಲ್ಲಿ ನಿಯಮಿತವಾಗಿ ರಕ್ತದಾನದಂತಹ ಶಿಬಿರಗಳನ್ನು ನಡೆಸಿದರೆ ದೇಶದಲ್ಲಿನ ರಕ್ತದ ಕೊರತೆಯನ್ನು ನೀಗಿಸಬಹುದು. ಧಾರ್ಮಿಕ ಕೇಂದ್ರಗಳು ಕೇವಲ ಪೂಜೆ ಪ್ರಾರ್ಥನೆಗಳಿಗೆ ಸೀಮಿತವಾಗಿರದೆ ಸಮಾಜಮುಖಿ ಾಗಿ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ಅವರು ತಿಳಿಸಿದರು.
ಮಣಿಪಾಲ ಕೆಎಂಸಿ ಬ್ಲಡ್ ಬ್ಯಾಂಕಿನ ಡಾ.ಮುಹಮ್ಮದ್ ಅಝೀಝ್ ಮಾತನಾಡಿ, ರಕ್ತದಾನ ಮಾಡುವುದರಿಂದ ಮೂರು ಜನರ ಪ್ರಾಣ ಉಳಿಸ ಬಹುದಾಗಿದೆ. ರಕ್ತದಾನದ ಬಗ್ಗೆ ಜನರಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಇದನ್ನು ದೂರ ಮಾಡಬೇಕಾಗಿದೆ. ರಕ್ತಕ್ಕೆ ಸಂಬಂಧಿಸಿ ವ್ಯಾಪಾರ ಮಾಡಲು ಆಗುವುದಿಲ್ಲ. ಯಾಕೆಂದರೆ ಅದನ್ನು ಉತ್ಪಾದನೆ ಮಾಡಲು ಆಗುವುದಿಲ್ಲ. ಮನುಷ್ಯರೇ ರಕ್ತದಾನ ಮಾಡಿ ಇತರರ ಜೀವ ಉಳಿಸಬೇಕಾಗುತ್ತದೆ ಎಂದರು.
ಉಡುಪಿ ಮಸೀದಿ ಅಧ್ಯಕ್ಷ ಮುಹಮ್ಮದ್ ಅರ್ಶಾದ್, ಖತೀಬ್ ವೌಲಾನ ರಶೀದ್ ಅಹ್ಮದ್ ನದ್ವಿ, ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಯು. ಇಬ್ರಾಹಿಮ್ ಉಪಸ್ಥಿತರಿದ್ದರು. ಅಸೋಸಿಯೇಶನ್ ಅಧ್ಯಕ್ಷ ಕಲ್ಯಾಣಪುರ ಅಬ್ದುಲ್ ಗಫೂರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ವಿ.ಎಸ್.ಉಮರ್ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಇಕ್ಬಾಲ್ ಮನಾ್ನ ಕಾರ್ಯಕ್ರಮ ನಿರೂಪಿಸಿ ವಂದಿಸಿದರು