ಉಡುಪಿ, ಫೆ.14: ಪಾಂಗಾಳದಲ್ಲಿ ಡಿ.5ರಂದು ನಡೆದ ಶರತ್ ಶೆಟ್ಟಿ(39) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಡುಪಿ ಎಸ್ಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ಕೊಲೆ ಪ್ರಕರಣದ ಮಾಹಿತಿ ನೀಡಿದರು. ಬಂಧಿತರನ್ನು ಸುರತ್ಕಲ್ ಕುಳಾಯಿಯ ದಿವೇಶ್ ಶೆಟ್ಟಿ(20) ಮತ್ತು ಲಿಖಿತ್ ಕುಲಾಲ್(21) ಹಾಗೂ ಮಂಗಳೂರಿನ ಆಕಾಶ್ ಕರ್ಕೇರ(24) ಮತ್ತು ಪ್ರಸನ್ನ ಶೆಟ್ಟಿ(40) ಎಂದು ಗುರುತಿಸಲಾಗಿದೆ.
ದಿವೇಶ್ ಮತ್ತು ಲಿಖಿತ್‌ನನ್ನು ಇಂದು ಉಡುಪಿ ನ್ಯಾಯಾ ಲಯಕ್ಕೆ ಹಾಜರುಪಡಿಸಿದ್ದು, ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಆಕಾಶ್ ಮತ್ತು ಪ್ರಸನ್ನ ಶೆಟ್ಟಿಯನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗುವುದು.
ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಕಟಪಾಡಿಯ ಯೋಗೀಶ್ ಆಚಾರ್ಯ, ನಾಗರಾಜ್, ಭೂಗತ ಪಾತಕಿ ಕಲಿ ಯೋಗೀಶ್ ಮತ್ತು ಕೃತ್ಯಕ್ಕೆ ಸಹಕರಿಸಿದ ಮುಕೇಶ್ ಹಾಗೂ ಇತರ ಆರೋಪಿಗಳ ಶೋಧ ಕಾರ್ಯ ಮುಂದುವರೆಸಲಾಗಿದೆ. ಯೋಗೀಶ್ ಆಚಾರ್ಯ ಮತ್ತು ಭರತ್ ಶೆಟ್ಟಿ ನಡುವಿನ ವೈರುತ್ವವೇ ಕೊಲೆಗೆ ಕಾರಣವಾಗಿದೆ. ಅದಕ್ಕಾಗಿ ಕಲಿ ಯೋಗೀಶ್ ಮೂಲಕ ಸುಪಾರಿ ನೀಡಿ ಈ ಕೊಲೆ ಮಾಡಲಾಗಿದೆ ಎಂದು ಅವರು ತಿಳಿಸಿದರು