ಉಡುಪಿ ಜಿಲ್ಲೆಯ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಿರಣ್ ಕೊಡ್ಗಿ ಪರವಾಗಿ ಇಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದಲ್ಲಿ ಬಿಜೆಪಿ ಅಧ್ಯಕ್ಷರಾದ ಜೆಪಿ ನಡ್ಡಾ ಆಗಮಿಸಿ ರೋಡ್ ಶೋ ನಡೆಸಿದರು.
ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಪರ ನಡ್ಡಾ ಪ್ರಚಾರ ನಡೆಸಿದರು. ಗುರು ನರಸಿಂಹ ದೇವಸ್ಥಾನದ ಮುಂಭಾಗದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ನಡ್ಡಾ, ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬ್ಯಾಟನ್ನು ಕೊಡ್ಗಿ ಕೈಗೆ ನೀಡಿದ್ದು, ಹಿರಿಯರು ಕಿರಿಯರಿಗೆ ಅವಕಾಶ ಕೊಟ್ಟಿದ್ದಾರೆ. ಈ ಸಂಪ್ರದಾಯ ಬಿಜೆಪಿಯಲ್ಲಿ ಇರಲು ಮಾತ್ರ ಸಾಧ್ಯ. ಕೊಡ್ಗಿ ಎಂಬ ಸಾಮಾನ್ಯ ಕಾರ್ಯಕರ್ತನನ್ನ ಬಹುಮತದಿಂದ ಗೆಲ್ಲಿಸಿ ಎಂದು ಕರೆ ನೀಡಿದರು.
ಕರ್ನಾಟಕಕ್ಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಶೀರ್ವಾದ ಸಿಗುತ್ತದೆ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಕ್ಷೇತ್ರಗಳ ಅಭಿವೃದ್ಧಿಗೆ ನಿರಂತರ ಕೊಡುಗೆ ನೀಡುತ್ತಾ ಬಂದಿದ್ದಾರೆ. ಕರ್ನಾಟಕದ ವಿಕಾಸಕ್ಕೆ ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರ ಬೇಕಾಗಿದೆ. ಮೋದಿ ಸರಕಾರ ಪವರ್ಫುಲ್ ಇಂಜಿನ್ ಸರ್ಕಾರವಾಗಿದೆ. ವಿಶ್ವಮಟ್ಟದಲ್ಲಿ ನಮ್ಮ ಪವರ್ ಫುಲ್ ಇಂಜಿನ್ ಸರ್ಕಾರ ಮಾನ್ಯತೆ ಪಡೆದಿದೆ ಎಂದರು.
ಇದೇ ಮಾದರಿ ಆಡಳಿತದ ಮೂಲಕ ಕರ್ನಾಟಕದಲ್ಲಿ ವಿಕಾಸದ ಹೊಸ ಆಯಾಮ ತೆರೆಯಬೇಕು. ಭಾರತ ದೇಶವನ್ನು ವಿಶ್ವಮಟ್ಟದಲ್ಲಿ ಗುರುತಿಸಲು ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಡಬಲ್ ಇಂಜಿನ್ ಸರ್ಕಾರದ ಆಶೀರ್ವಾದ ಕರ್ನಾಟಕಕ್ಕೆ ಬರಪೂರ ಸಿಕ್ಕಿದೆ. ಕೇವಲ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಒಂದು ಲಕ್ಷ ಕೋಟಿ ಅನುದಾನ ಕರ್ನಾಟಕಕ್ಕೆ ನೀಡಲಾಗಿದೆ. ತುಮಕೂರಿನಲ್ಲಿ ಅತಿ ದೊಡ್ಡ ಇಂಡಸ್ಟ್ರಿಯಲ್ ಕಾರಿಡೋರ್ ಆಗುತ್ತಿದೆ. ಇದು ದಕ್ಷಿಣ ಭಾರತದ ಅತಿ ದೊಡ್ಡ ಇಂಡಸ್ಟ್ರಿಯಲ್ ಹಬ್ ಆಗಲಿದೆ ಎಂದರು.
ತುಮಕೂರಿನಲ್ಲಿ ಹೆಲಿಕಾಪ್ಟರ್ ತಯಾರಿ ಕಾರ್ಖಾನೆ ಸಿದ್ಧವಾಗುತ್ತಿದೆ. ಈ ಮೂಲಕ ಹೆಲಿಕ್ಯಾಪ್ಟರ್ ನಿರ್ಮಾಣದಲ್ಲೂ ಕರ್ನಾಟಕ ಕೊಡುಗೆ ನೀಡಿದೆ. ರೈಲ್ವೆ ಡಬ್ಬಿಗಳನ್ನು ತಯಾರಿಸುವ ಕಾರ್ಖಾನೆ ಕೂಡ ಕರ್ನಾಟಕದಲ್ಲಿ ಆಗಲಿದೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ಅತಿ ದೊಡ್ಡ ಕೊಡುಗೆ ನೀಡಲಿದೆ. ವಿದೇಶದ ಅತಿ ದೊಡ್ಡ ಆರ್ಥಿಕ ಹೂಡಿಕೆ ಕರ್ನಾಟಕಕ್ಕೆ ಆಗುತ್ತಿದೆ. ಇದು ಮೋದಿಜಿ ಅವರ ಆಶೀರ್ವಾದದಿಂದ ಆಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಾಗಲೆಲ್ಲ ಕರ್ನಾಟಕದ ಅಭಿವೃದ್ಧಿಗೆ ಬ್ರೇಕ್ ಬಿದ್ದಿದೆ. ನಿಮಗೆ ಮೋದಿ ಸರಕಾರದ ವೇಗಕ್ಕೆ ಬ್ರೇಕ್ ಬೀಳುವುದು ಬೇಕಾ? ಕುಮಾರಸ್ವಾಮಿ ಸರಕಾರ ಕಿಸಾನ್ ಸನ್ಮಾನ ಯೋಜನೆಗೆ ಕೇವಲ 17 ಲಕ್ಷ ರೈತರ ಹೆಸರು ಕಳಿಸಿತ್ತು ಆದರೆ ಯಡಿಯೂರಪ್ಪ ಸರಕಾರ 54 ಲಕ್ಷ ರೈತರ ಹೆಸರು ಕಳುಹಿಸಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಸಿದ್ದರಾಮಯ್ಯ ಯಾವುದೇ ಪಟ್ಟಿ ಕಳುಹಿಸಲಿಲ್ಲ. ಯಡಿಯೂರಪ್ಪ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಒಂಬತ್ತು ಲಕ್ಷ ಅರ್ಹ ಫಲಾನುಭವಿಗಳ ಆಯ್ಕೆ ನಡೆಯಿತು. ಡಬಲ್ ಇಂಜಿನ್ ಸರಕಾರ ಈ ಎಲ್ಲಾ ಕಾರಣಗಳಿಗೆ ಅಗತ್ಯವಿದೆ. ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ ನಾಲ್ಕು ಕಿಲೋ ಅಕ್ಕಿ ಗೋಧಿ ನೀಡಿದ್ದಾರೆ.
ಮೀಸಲಾತಿ ವಿಚಾರದಲ್ಲಿ ಕರ್ನಾಟಕ ದಿಟ್ಟ ನಿರ್ಧಾರ ಕೈಗೊಂಡಿದೆ.ದಲಿತರಿಗೆ 9 ಶೇಕಡ ಮೀಸಲಾತಿ ,ಆದಿವಾಸಿಗಳಿಗೆ ಶೇ.4 ಮಿಸಲಾತಿ, ಲಿಂಗಾಯತರಿಗೆ ಶೇ.2 ಮೀಸಲಾತಿ ಹೆಚ್ಚಳ ಮಾಡಲಾಗಿದೆ ಎಂದ ಅವರು ಕಾಂಗ್ರೆಸ್ ಸರ್ಕಾರ ಬಂದರೆ ಇದನ್ನು ರದ್ದು ಮಾಡುವುದಾಗಿ ಸಿದ್ದರಾಮಯ್ಯ ಹೇಳುತ್ತಾರೆ.
ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದಾಗಿ ಹೇಳುತ್ತಾರೆ. ಇಂತಹವರು ಅಧಿಕಾರಕ್ಕೆ ಬರಬೇಕೆ? ನೀವು ಲಿಂಗಾಯಿತರ ಮೀಸಲಾತಿ ವಾಪಸ್ ಪಡೆಯುತ್ತೀರಾ ದಲಿತರ ಆದಿವಾಸಿಗಳ ಮೀಸಲಾತಿ ವಾಪಾಸ್ ಪಡೆಯುತ್ತೀರಾ? ಧರ್ಮದ ಆಧಾರದಲ್ಲಿ ಪಿ ಎಫ್ ಐ ಕಾರ್ಯಕರ್ತರನ್ನು ಬಿಡುಗಡೆ ಮಾಡುತ್ತಾರೆ. ಯಡಿಯೂರಪ್ಪ ಸರಕಾರ ಜೈಲುಗಟ್ಟಿದ ಪಿಫೈ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದಾರೆ. ಅಮಿತ್ ಶಾ ಪಿ ಎಫ್ ಐ ನಿಷೇಧ ಮಾಡಿದ ಬಳಿಕ ಮತ್ತೆ ಅವರನ್ನು ಜೈಲಿಗಟ್ಟಲಾಗಿದೆ. ಪಿಎಫ್ ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕಾ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರದ ಬಗ್ಗೆ ಡಿಕೆಶಿ ಮಾತನಾಡುತ್ತಾರೆ. ಪೋಲಿಸ್ ನೇಮಕಾತಿ ಹಗರಣ ನೀವು ಮಾಡುತ್ತಿರಿ, ಶಿಕ್ಷಕರ ನೇಮಕಾತಿಯಲ್ಲಿ ಹಗರಣ ಮಾಡುತ್ತೀರಿ, 8000 ರೈತರ ಭೂಮಿ ನುಂಗಿದ್ದಿರಿ. ಬಿಬಿಎಂಪಿಯಲ್ಲಿ ಬೋರ್ವೆಲ್ ನಲ್ಲೂ ಭ್ರಷ್ಟಾಚಾರ ಮಾಡಿದ್ದೀರಿ. ಸ್ಲಂ ಡೆವಲಪ್ಮೆಂಟ್ ಬೋರ್ಡ್ ನಲ್ಲೂ ಭ್ರಷ್ಟಾಚಾರ ಮಾಡಿದ್ದೀರಿ. ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿರುವ ನೀವು ಭ್ರಷ್ಟಾಚಾರದ ಬಗ್ಗೆ ಹೇಗೆ ಮಾತನಾಡುತ್ತೀರಿ ಎಂದು ಆಕ್ರೋಶ ಹೊರ ಹಾಕಿದರು.
ತಮ್ಮ ಆಡಳಿತ ಅವಧಿಯ ಪ್ರತಿವರ್ಷದಲ್ಲೂ ಹಗರಣ ಮಾಡಿದ್ದಾರೆ. ಡಿಕೆ ಶಿವಕುಮಾರ್ ಜಾಮೀನಿನಲ್ಲಿ ಇರೋದು ಗೊತ್ತಲ್ವಾ.ಕಾಂಗ್ರೆಸ್ ನ ನಾಯಕರು ಒಂದು ಜೈಲಿನಲ್ಲಿದ್ದಾರೆ ಇಲ್ಲ ಬೇಲ್ ನಲ್ಲಿ ಇದ್ದಾರೆ. ಸೋನಿಯಾ ಗಾಂಧಿ ರಾಹುಲ್ ಗಾಂಧಿ ಡಿಕೆ ಶಿವಕುಮಾರ್ ಎಲ್ಲರೂ ಬೇಲ್ನಲ್ಲಿದ್ದಾರೆ.ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಜನರ ಹಿತ ಕಾಪಾಡಿಲ್ಲ ಎಂದರು.
ಕಿರಣ್ ಕುಮಾರ್ ತುಂಬಾ ಸಮಯದಿಂದ ಜನಸೇವೆ ಮಾಡುತ್ತಿದ್ದಾರೆ. ಕಿರಣ್ ಕುಮಾರ್ ಗೆ ಅವಕಾಶ ಕಲ್ಪಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಧನ್ಯವಾದ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ.ದೊಡ್ಡ ನಾಯಕರು ಸಣ್ಣ ನಾಯಕರಿಗೆ ಬ್ಯಾಟನ್ ಹಸ್ತಾಂತರಿಸುತ್ತಾರೆ ಎಂದು ಈ ಸಂದರ್ಭದಲ್ಲಿ ಶ್ಲಾಘಿಸಿದರು.