ಹೂಡೆ:ಮಾದಕ ವ್ಯಸನದ ವಿರುದ್ಧ ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ನಡೆಯುತ್ತಿರುವ ಅಭಿಯಾನದ ಪ್ರಯುಕ್ತ ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆ ಮತ್ತು ನಶಾ ಮುಕ್ತ ಅಭಿಯಾನ ಉಡುಪಿ ಜಿಲ್ಲಾ ವತಿಯಿಂದ ವಿದ್ಯಾರ್ಥಿಗಳಿಗಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಉಡುಪಿಯ ಖ್ಯಾತ ಮನೋರೋಗ ತಜ್ಞರಾದ ಡಾ.ಪಿವಿ.ಭಂಡಾರಿ, ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು.
ಮಕ್ಕಳಿಂದ ವೃದ್ದಪ್ಯಾದವರೆಗೆ ಈ ಸಿಗರೇಟು ಜೀವಕ್ಕೆ ಹಾನಿಕಾರಕ. ತಂಬಾಕು ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಯಾವುದೇ ಕಾರಣಕ್ಕೂ ಮಕ್ಕಳು ಇದನ್ನು ಸೇವಿಸಬಾರದು. ಇದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ತಂಬಾಕು, ಧೂಮಪಾನ ರಕ್ತದೊತ್ತಡ ಹೆಚ್ಚಿಸುತ್ತದೆ ಶರಾಬು ಸೇವನೆಯಿಂದ ಲಿವರ್ ಕೆಡುತ್ತದೆ ಎಂದರು.
ಆರಂಭದಲ್ಲಿ ಮಾದಕ ವ್ಯಸನವು ಸಂತೋಷವನ್ನು ಕೊಡುತ್ತದೆ. ನಂತರ ಅದು ಜೀವಕ್ಕೆ ಮಾರಕವಾಗಿ ಪರಿಣಾಮಿಸುತ್ತದೆ. ಒಮ್ಮೆ ಈ ಚಟಗಳನ್ನು ಮೈಗೂಡಿಸಿಕೊಂಡರೆ ಅದರಿಂದ ಹೊರಬರುವುದು ಕಷ್ಟ ಸಾಧ್ಯವಾಗುತ್ತದೆ. ಅದರಿಂದ ಜೀವನ ನಾಶವಾಗುತ್ತದೆ ಎಂದರು.
ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು. ಅತೀ ಹೆಚ್ಚು ಮೊಬೈಲ್ ಬಳಕೆ ವ್ಯಸನದ ಸಾಲಿನಲ್ಲಿ ಬರುತ್ತದೆ. ಅಗತ್ಯಗನುಸಾರವಾಗಿ ಮಾತ್ರ ಮೊಬೈಲ್ ಬಳಕೆ ಒಳ್ಳೆಯದು. ಪರೀಕ್ಷೆಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ದಿನಕ್ಕೆ ಒಂದು ತಾಸಿಗಿಂತ ಹೆಚ್ಚು ಬಳಕೆ ಮಾಡಬಾರದೆಂದು ಸಲಹೆ ನೀಡಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ಅಧ್ಯಕ್ಷರಾದ ಅಬ್ದುಲ್ ಕಾದಿರ್ ಮೊಯ್ದಿನ್, ಅಭಿಯಾನ ಸಂಚಾಲಕರಾದ ಇಸ್ಮಾಯಿಲ್ ಕಿದೆವರ್, ಸಾಲಿಹಾತ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ, ಮುಖ್ಯೋಪಾಧ್ಯಾಯಿನಿ ಸುನಾಂದ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಶಿಕ್ಷಕಿ ಫಹೀನಾ ಮುಶ್ರಿಫ್ಫುನ್ ನಾಖುದಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶೈಲಾ ಡಿಸೋಜ ವಂದಿಸಿದರು.