ಉಡುಪಿ | ಅಪಘಾತ ಪ್ರಕರಣ : ಆರೋಪಿಗಳಿಗೆ ಜೈಲುಶಿಕ್ಷೆ

ಉಡುಪಿ: ಅತೀ ವೇಗ ಹಾಗೂ ಅಜಾಕರೂಕತೆಯಿಂದ ಬೈಕ್ ಚಲಾಯಿಸಿ, ತೀವ್ರ ಸ್ವರೂಪದ ಗಾಯಗೊಳಿಸಿದ ವ್ಯಕ್ತಿಗೆ ಹಾಗೂ ಬೈಕ್‌ಗೆ ವಾಯು ಮಾಲಿನ್ಯ ಪತ್ರ ಹೊಂದಿಲ್ಲದ ವ್ಯಕ್ತಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

2020 ಅಕ್ಟೋಬರ್ 3 ರಂದು ರಾತ್ರಿ 10.15 ರ ಸುಮಾರಿಗೆ 1ನೇ ಆರೋಪಿಯಾದ ಪ್ರಶಾಂತ್ ಎಂಬಾತನು 2ನೇ ಆರೋಪಿಯಾದ ಶರತ್‌ಗೆ ಸೇರಿದ ಮೋಟಾರ್ ಸೈಕಲ್ ಅನ್ನು ಸಂತೆಕಟ್ಟೆ ಕಡೆಯಿಂದ ಬ್ರಹ್ಮಾವರ ಕಡೆಗೆ ಅತೀವೇಗ ಹಾಗೂ ಅಜಾಕರೂಕತೆಯಿಂದ ಚಲಾಯಿಸಿ ಕಳ್ತೂರು ಗ್ರಾಮದ ಸಂತೆಕಟ್ಟೆಯ ಗಣೇಶ್ ಕಲ್ಯಾಣ ಮಂಟಪದ ಸಮೀಪ ಬರುತ್ತಿದ್ದ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್‌ನಲ್ಲಿದ್ದ ಹರೀಶ್ ನಾಯ್ಕ್ ಹಾಗೂ ಕೃಷ್ಣಪ್ಪ ವಾಲ್ಮೀಕಿ ಎಂಬವರಿಗೆ ತೀವ್ರ ಸ್ವರೂಪದಲ್ಲಿ ಗಾಯಗೊಳಿಸಿದ್ದಲ್ಲದೇ, 2 ನೇ ಆರೋಪಿಯು ತನ್ನ ಮೋಟಾರ್ ಸೈಕಲ್‌ಗೆ ವಾಯು ಮಾಲಿನ್ಯ ಪತ್ರ ಹೊಂದಿರುವುದಿಲ್ಲ ಮತ್ತು ವಾಹನ ಚಾಲನಾ ಪರವಾನಿಗೆ ಹೊಂದದೇ ಇರುವ ವ್ಯಕ್ತಿಗೆ ಮೋಟಾರ್ ಸೈಕಲ್ ಅನ್ನು ಚಲಾಯಿಸಲು ನೀಡಿರುವ ಹಿನ್ನೆಲೆ, ಹೆಬ್ರಿ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.


ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ, ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ದೀಪಾ ಅವರು, ಆರೋಪಿ ಪ್ರಶಾಂತ್‌ಗೆ 4 ತಿಂಗಳು ಸಾದಾ ಶಿಕ್ಷೆ ಹಾಗೂ 5000 ರೂ. ದಂಡ ವಿಧಿಸಿದ್ದು, ದಂಡ ಪಾವತಿಸಲು ಒಪ್ಪದಿದ್ದಲ್ಲಿ 10 ದಿನಗಳ ಸಾದಾ ಶಿಕ್ಷೆ ಹಾಗೂ 2ನೇ ಆರೋಪಿ ಶರತ್ ಎಂಬಾತನಿಗೆ 7000 ರೂ. ದಂಡ ವಿಧಿಸಿ, ದಂಡ ಪಾವತಿಸಲು ಒಪ್ಪದಿದ್ದಲ್ಲಿ 10 ದಿನಗಳ ಸಾದಾ ಶಿಕ್ಷೆ ವಿಧಿಸಿ, ತೀರ್ಪು ನೀಡಿರುತ್ತಾರೆ.
ಸರಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ ಕೆ ವಾದ ಮಂಡಿಸಿರುತ್ತಾರೆ.

Latest Indian news

Popular Stories