ಉಡುಪಿ: ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಪಾಲಿಗೆ ಕಿರುಕುಳದ ತಾಣಗಳಾಗುತ್ತಿವೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ದಿನೇ ದಿನೇ ಸವಾಲುಗಳು ಹೆಚ್ಚಾಗುತ್ತಿವೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷರಾದ ಶಾಹಿದ್ ಅಲೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದೆಡೆ ದುಬಾರಿ ಶುಲ್ಕದ ಹೆಸರಿನಲ್ಲಿ ಶೋಷಣೆ ನಡೆಯುತ್ತಿದ್ದರೆ ಇನ್ನೊಂದೆಡೆ ರ್ಯಾಗಿಂಗ್ ಪಿಡುಗು ಕಾಡುತ್ತಿದೆ. ಇದರಿಂದ ತಪ್ಪಿಸಿಕೊಂಡ ಕಾಲೇಜುಗಳಲ್ಲಿ ಹಿಜಾಬ್ ಹೆಸರಿನಲ್ಲೋ, ಉತ್ತಮ ಫಲಿತಾಂಶ ತರಲೇ ಬೇಕೆಂಬ ಒತ್ತಡದ ಮೂಲಕವೋ ನಿರಂತರವಾಗಿ ಕಿರುಕುಳ ನಡೆಯುತ್ತಿರುತ್ತದೆ. ಇಂತಹ ಕಿರುಕುಳಗಳಿಂದ ಹೊರಬರಲಾರದ ಕೆಲವು ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನೇ ಬಲಿ ಕೊಡುತ್ತಿದ್ದಾರೆ ಎಂದು ಅವರು ಈ ಮೂಲಕ ಕಳವಳ ವ್ಯಕ್ತಪಡಿಸಿದರು.
ಉಡುಪಿಯ ಎಸ್. ಆರ್ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಕಲಿಯುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ದೀಪ್ತಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ಹಿನ್ನೆಲೆಯಲ್ಲಿ ಕಾಲೇಜು ಪ್ರಾಂಶುಪಾಲರು ಎಲ್ಲಾ ವಿದ್ಯಾರ್ಥಿಗಳ ಎದುರು ನಿಂದಿಸಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ. ಇದು ಅತ್ಯಂತ ವಿಷಾದನೀಯ.
ಸಣ್ಣಪುಟ್ಟ ವಿಚಾರಗಳಿಗೆ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಎಲ್ಲರ ಎದುರು ನಿಂದಿಸಿ ಅವಮಾನಿಸಿ ಅವರ ಸಾವಿಗೆ ಕಾರಣವಾಗುತ್ತಿರುವುದು ಖಂಡನಾರ್ಹ. ಈ ಪ್ರಕರಣದಲ್ಲಿ ಕಾಲೇಜು ಪ್ರಾಂಶುಪಾಲರಿಂದ ತಪ್ಪಾಗಿದ್ದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ..