22 ಬಿಜೆಪಿ ಅಭ್ಯರ್ಥಿಗಳು ಫೈನಲ್: ಶೋಭಾ -ಶೆಟ್ಟರ್ ಗೆ ಟಿಕೆಟ್ – ಅಧಿಕೃತ ಘೋಷಣೆ ಮಾತ್ರ ಬಾಕಿ!

ಬೆಂಗಳೂರು: ನವದೆಹಲಿಯಲ್ಲಿ ಸೋಮವಾರ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯು ಕರ್ನಾಟಕದ 22 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಲಾಗಿದೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ.

ಎಲ್ಲಾ ಅಭ್ಯರ್ಥಿಗಳ ಹೆಸರುಗಳನ್ನು ಒಂದು ಅಥವಾ ಎರಡು ದಿನಗಳಲ್ಲಿ ಎರಡು ಪಟ್ಟಿಗಳಲ್ಲಿ ಘೋಷಿಸುವ ನಿರೀಕ್ಷೆಯಿದೆ. ಬಿಜೆಪಿ ಮೂಲಗಳ ಪ್ರಕಾರ, ಬೆಳಗಾವಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಹುಬ್ಬಳ್ಳಿ-ಧಾರವಾಡದಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಉಡುಪಿ-ಚಿಕ್ಕಮಗಳೂರಿನಿಂದ ಶೋಭಾ ಕರಂದ್ಲಾಜೆ ಮತ್ತು ಶಿವಮೊಗ್ಗದಿಂದ ಬಿವೈ ರಾಘವೇಂದ್ರ ಸೇರಿದಂತೆ ಕೆಲವು ಹೆಸರುಗಳನ್ನು ಅನುಮೋದಿಸಲಾಗಿದೆ.

ಮೈಸೂರು-ಕೊಡಗು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಸೇರಿದಂತೆ ಕೆಲವು ಕ್ಷೇತ್ರಗಳನ್ನು ತಡೆಹಿಡಿಯಲಾಗಿದೆ. ಪಕ್ಷದ ನಾಯಕರು ಬುಧವಾರದೊಳಗೆ ಈ ಕ್ಷೇತ್ರಗಳ ಹೆಸರನ್ನು ತೆರವುಗೊಳಿಸುವ ನಿರೀಕ್ಷೆಯಿದೆ. ಚಿಕ್ಕೋಡಿಯಿಂದ ರಮೇಶ್ ಕತ್ತಿ, ಚಿಕ್ಕಬಳ್ಳಾಪುರದಿಂದ ಡಾ ಸುಧಾಕರ್, ವಿಜಯಪುರದಿಂದ ಗೋವಿಂದ್ ಕಾರಜೋಳ, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ, ಬೆಂಗಳೂರು ಸೆಂಟ್ರಲ್‌ನಿಂದ ಪಿಸಿ ಮೋಹನ್, ಬೆಂಗಳೂರು ಗ್ರಾಮಾಂತರದಿಂದ ಡಾ ಸಿಎನ್ ಮಂಜುನಾಥ್, ತುಮಕೂರಿನಿಂದ ವಿ ಸೋಮಣ್ಣ, ಹಾವೇರಿಯ ಬಸವರಾಜ ಬೊಮ್ಮಾಯಿ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೈತ್ರಿಯಲ್ಲಿ ಸಹಜವಾಗಿ ಜೆಡಿಎಸ್ ಗೆ ಎರಡು ಸ್ಥಾನಗಳನ್ನು ನೀಡಬೇಕಾಗುತ್ತದೆ, ಆದರೆ ಆ ಎರಡು ಸೀಟುಗಳು ಯಾವ ಕ್ಷೇತ್ರಗಳು ಎಂದು ಇನ್ನೂ ತೀರ್ಮಾನವಾಗಿಲ್ಲ. ಎಲ್ಲಾ ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿರುವುದಂತೂ ನಿಜ ಎಂದಷ್ಟೇ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಯ ಚರ್ಚೆ ಬಗ್ಗೆ ಮಾಹಿತಿ ನೀಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆಯಾಗಿದೆ. ರಾಜ್ಯದ 28 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆಯಾಗಿದೆ. ಮುಂದಿನ ಸಿಇಸಿ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಇಂದು ಪಟ್ಟಿ ಬಿಡುಗಡೆ ಮಾಡುವುದಿಲ್ಲ, ನಾಳೆ ಬಿಡುಗಡೆ ಆಗಬಹುದು ಎಂದರು.

ಕಗ್ಗಂಟಾಗಿರುವ ಕ್ಷೇತ್ರಗಳು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳ ಆಯ್ಕೆ ಬಿಜೆಪಿ ನಾಯಕರಿಗೆ ಅಷ್ಟು ಸುಲಭವಾಗಿರುವಂತೆ ಕಾಣುತ್ತಿಲ್ಲ. ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ದಕ್ಷಿಣ ಕನ್ನಡ ಸಂಸದ ನಳಿನ್​ ಕುಮಾರ್ ಕಟೀಲ್, ಉತ್ತರ ಕನ್ನಡ ಅನಂತಕುಮಾರ್ ಹೆಗಡೆ, ಬೀದರ್ ಕ್ಷೇತ್ರದ ಭಗವಂತ್ ಖೂಬಾ, ದಾವಣಗೆರೆಯ ಸಿದ್ದೇಶ್ವರ್​ಗೆ ಈ ಬಾರಿ ಲೋಕಸಭಾ ಟಿಕೆಟ್ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಮೈಸೂರು, ಉತ್ತರಕನ್ನಡ, ಚಾಮರಾಜನಗರ, ಬೆಂಗಳೂರು ಉತ್ತರ. ಚಿಕ್ಕಬಳ್ಳಾಪುರ. ಚಿಕ್ಕಮಗಳೂರು,.ಹಾವೇರಿ, ಬೆಳಗಾವಿ, ಮಂಗಳೂರು, ದಾವಣಗೆರೆ ಕ್ಷೇತ್ರದ ಟಿಕೆಟ್​ ಕಗ್ಗಂಟಾಗಿ ಉಳಿದೆ ಎಂದು ಹೇಳಲಾಗುತ್ತಿದೆ.

Latest Indian news

Popular Stories