ಫೆ.27ರಂದು ರಾಜ್ಯಸಭೆ ಚುನಾವಣೆಯ ಫಲಿತಾಂಶ ಘೋಷಣೆಯ ಸಂದರ್ಭದಲ್ಲಿ ಕಾಂಗ್ರೆಸ್ಸಿನ ನಾಜೀರ್ ಹುಸೇನ್ ಗೆಲುವನ್ನು ಸಂಭ್ರಮಿಸುವ ಭರದಲ್ಲಿ ಅವರ ಬೆಂಬಲಿಗರೆನ್ನಲಾದ ವ್ಯಕ್ತಿಗಳು ವಿಧಾನ ಸೌಧದ ಆವರಣದೊಳಗೆ ಪಾಕಿಸ್ತಾನ್ ಜಿಂದಾಬಾದ್ ಎಂಬ ದೇಶದ್ರೋಹಿ ಘೋಷಣೆ ಕೂಗಿದ್ದರೂ,ಕಾಂಗ್ರೆಸ್ ಮುಖಂಡರು ಅಂತಹ ಭಯೋತ್ಪಾದಕರ ಪರವಾಗಿ ನಿಂತು ಘಟನೆಯನ್ನು ಅಲ್ಲಗಳೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಬಿಜೆಪಿ ದಾಖಲಿಸಿದ ದೂರಿನನ್ವಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಎಸ್ಎಲ್ ವರದಿಯನ್ನಾಧರಿಸಿ ಪೋಲೀಸರು ಮೂರು ಮಂದಿ ದೇಶದ್ರೋಹಿಗಳನ್ನು ಬಂಧಿಸಿರುವ ಪ್ರಕ್ರಿಯೆಯಿಂದ ಕಾಂಗ್ರೆಸ್ಸಿನ ಒಂದೇ ಕೋಮಿನ ಅತಿಯಾದ ಓಲೈಕೆಗೆ ತಕ್ಕ ಶಾಸ್ತಿಯಾದಂತಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.
ಈ ಹಿಂದೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಭಯೋತ್ಪಾದಕನ ಜೊತೆಗೆ ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣದ ಆರೋಪಿಗಳನ್ನು ‘ದೇ ಆರ್ ಮೈ ಬ್ರದರ್ಸ್’ ಎಂದಿರುವ ಡಿಸಿಎಂ ಡಿಕೆ ಶಿವಕುಮಾರ್ ಸಹಿತ ಸಿಎಂ ಸಿದ್ದರಾಮಯ್ಯ ಸಂಪುಟದ ಸಚಿವರುಗಳಾದ ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್ ಮುಂತಾದವರು ದೇಶ ವಿರೋಧಿ ಪಾಕ್ ಪರ ಘೋಷಣೆ ಕೂಗಿದ ಭಯೋತ್ಪಾದಕರನ್ನು ಬೆಂಬಲಿಸಿ,ಅಂತಹ ಘೋಷಣೆ ನಡೆದಿಲ್ಲ ಎಂದು ಘಟನೆಯನ್ನು ಸಮರ್ಥಿಸಿಕೊಂಡಿರುವುದು ದೇಶದ್ರೋಹಕ್ಕೆ ಸಮನಾದ ಕುಕೃತ್ಯವಾಗಿದೆ.
ಇದೀಗ ಕಾನೂನಾತ್ಮಕ ಪೋಲಿಸ್ ತನಿಖೆಯ ಮೂಲಕ ಮೂರು ಮಂದಿ ಭಯೋತ್ಪಾದಕರ ಬಂಧನವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಚಿವರುಗಳ ಪ್ರತಿಕ್ರಿಯೆ ಏನು ಎಂಬುದು ಕುತೂಹಲಕಾರಿಯಾಗಿದೆ. ಈ ನೆಲದ ಕಾನೂನನ್ನು ದಿಕ್ಕರಿಸಿ, ಪ್ರಕರಣದ ತನಿಖೆಗೂ ಮುನ್ನ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿರುವ ಇಂತಹ ದೇಶ ವಿರೋಧಿ ಮನಸ್ಥಿತಿಯ ಕಾಂಗ್ರೆಸ್ ಮುಖಂಡರು ರಾಜ್ಯದ ಜನತೆಯ ಕ್ಷಮೆ ಕೋರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಬ್ ಕೇ ಸಾಥ್ ಸಬ್ ಕೇ ವಿಕಾಸ್, ಸಬ್ ಕೇ ವಿಶ್ವಾಸ್, ಸಬ್ ಕೇ ಪ್ರಯಾಸ್’ ತತ್ವದಡಿ ಎಲ್ಲ ವರ್ಗಗಳ ಶ್ರೇಯೋಭಿವೃದ್ಧಿಗೆ ಅಹರ್ನಿಶಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನಪರ ಆಡಳಿತ ಜನಮಾನಸದಲ್ಲಿ ಹೊಸ ಭರವಸೆ ಮೂಡಿಸಿದೆ. ರಾಜ್ಯದಲ್ಲಿ ಕೇವಲ ಅಧಿಕಾರಕ್ಕೇರುವ ಸಲುವಾಗಿ ಒಂದೇ ಕೋಮಿನ ಅತಿಯಾದ ಓಲೈಕೆ ಕಾಂಗ್ರೆಸ್ ಪಕ್ಷಕ್ಕೆ ಮುoದಿನ ದಿನಗಳಲ್ಲಿ ಮುಳುವಾಗಲಿರುವುದು ನಿಶ್ಚಿತ.
ಈ ಹಿನ್ನೆಲೆಯಲ್ಲಿ ದೇಶ ಹಿತ ಮತ್ತು ರಾಜ್ಯದ ಅಭಿವೃದ್ಧಿಯನ್ನು ಮರೆತು ಒಂದು ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮಾತ್ರ ದುರ್ಬಳಕೆ ಮಾಡುತ್ತಿರುವ ದೇಶ ವಿರೋಧಿ ಕಾಂಗ್ರೆಸ್ಸಿಗೆ ರಾಜ್ಯದ ಜನತೆ ಮುಂದಿನ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.