ಕೆಲವೇ ದಿನಗಳಲ್ಲಿ ಯಾಂತ್ರಿಕೃತ ಮೀನುಗಾರಿಕೆಗೆ “ಮಳೆಗಾಲ” ದ ಬ್ರೇಕ್ ; ಬಲೆ ಹಿಡಿದು ಸಿದ್ಧನಾಗಿದ್ದಾನೆ ಸಾಂಪ್ರದಾಯಿಕ ಮೀನುಗಾರ!

ವಿಶೇಷ ವರದಿ: ವೈ.ಎನ್.ಕೆ

ಕರಾವಳಿ ಎಂದರೆ ಮೀನುಗಾರಿಕೆ. ಇಲ್ಲಿನ ಬಹುತೇಕ‌ಜನ ಅವಲಂಬಿತರಾಗಿರುವುದು ಅರಬಿ ಸಮುದ್ರದ ಯಾಂತ್ರಿಕೃತ ಬೋಟ್ ಬಳಸಿ ನಡೆಸುವ ಮೀನುಗಾರಿಕೆಗೆ…, ಹೌದು ಮಳೆಗಾಲ ಸಮೀಪಿಸುತ್ತಿದೆ.‌ಈ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದ ಕಾರಣ ಹಲವು ಅನಾಹುತಗಳು ಸಂಭವಿಸುವ ಸಾಧ್ಯತೆ ಒಂದು ಕಡೆಯಾದರೆ ಮೀನುಗಳು ಮೊಟ್ಟೆಯಿಡುವ ಸಮಯ. ಮಳೆಗಾಲದ ಈ ಮೂರು ತಿಂಗಳು ಯಾಂತ್ರಿಕೃತ ಮೀನುಗಾರಿಕೆಗೆ ವಿರಾಮ ನೀಡಲಾಗುತ್ತದೆ. ಆದರೆ ಸಂಪ್ರದಾಯಿಕ ಮೀನುಗಾರಿಕೆ ಚಾಲ್ತಿಯಲ್ಲಿರುತ್ತದೆ.

ನದಿ, ಸಮುದ್ರದಲ್ಲಿ ಸಾಂಪ್ರದಾಯಿಕ ವಿಧಾನಗಳ ಮೂಲಕ ಮೀನು ಹಿಡಿಯಲು ಮೀನುಗಾರರು ಮೇ ಮಧ್ಯವಧಿಯಲ್ಲಿ ಸಿದ್ಧರಾಗುತ್ತಾರೆ. “ತೂಫಾನ್” ಆಗಿ ಉತ್ತಮ‌ ಮಳೆಯಾದ ತಕ್ಷಣ ನದಿ-ತೊರೆಯಲ್ಲಿ ಯಥೆಚ್ಚಾವಾಗಿ ಮೀನುಗಳು ಬರುತ್ತದೆ. ಇದನ್ನು ಹಿಡಿದು ಮಾರುವುದು ವಾಡಿಕೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಮತ್ಸ್ಯಕ್ಷಾಮ ಸಮಸ್ಯೆ ಕಾಡುತ್ತಿದ್ದು ನದಿಯಲ್ಲೂ “ಸಾಂಪ್ರದಾಯಿಕ” ಮೀನುಗಾರರಿಗೆ ನಿರೀಕ್ಷಿಸಿದಷ್ಟು ಮೀನು ಸಿಗುತ್ತಿಲ್ಲ.

ಈ ಕುರಿತು ದಿ ಹಿಂದುಸ್ತಾನ್ ಗಝೆಟ್’ನೊಂದಿಗೆ ಮಾತನಾಡಿದ ಸಾಂಪ್ರದಾಯಿಕ ಮೀನುಗಾರಿಕೆಗೆ ಬಲೆ ಸಿದ್ದಪಡಿಸುತ್ತಿದ್ದ ರಫೀಕ್, ” ಈ ಮುಂಚಿನಂತೆ ಈಗ ಮೀನು ಸಿಗುವುದಿಲ್ಲ. ಈ ಮುಂಚೆ ಮಳೆಗಾಲದಲ್ಲಿ ತೂಫಾನ್ ಆಗಿ ಉತ್ತಮ ಮಳೆಯಾಗಿ ನೆರೆ ಬಂದು ಹೋದ ತಕ್ಷಣ ನದಿಯಲ್ಲಿ ಉತ್ತಮ ಮೀನು ಸಿಗುತ್ತಿತ್ತು. “ಕಾಣೆ, ನಂಗ್, ಏಡಿ,ಏರಿ, ಕೆಂಬೇರಿ, ರಾಮೋಸ್” ಸೇರಿದಂತೆ ಹಲವು ಬಹು ಬೇಡಿಕೆಯ‌ ಮೀನುಗಳು ನದಿಗೆ ಹರಿದು ಬರುತ್ತಿತ್ತು. ಇದೀಗ ಬಹಳ ವಿರಳವೆಂಬಂತಾಗಿ‌ ಎಂದು ಹೇಳುತ್ತಾರೆ.

“ಈ ಹಿಂದಿನ ಮಳೆಗಾಲದಲ್ಲೂ ನದಿಯಲ್ಲಿ ತೀವ್ರ ಮೀನಿನ ಕೊರತೆಯಿತ್ತು”. ಮೀನುಗಾರಿಕೆಗೆ ಪೂರಕವಾದ ತೂಫಾನ್, ಮಳೆಯು ಸರಿಯಾಗಿ ಬಾರದ ಕಾರಣ ಈ ಏರುಪೇರು.  ಸಾಮಾನ್ಯವಾಗಿ ನಾವು ಮಳೆಗಾಲದಲ್ಲಿ ಬೀಣಿ ಬಲೆಯನ್ನು ನದಿಯಲ್ಲಿ ಹಾಕಿ ಇಂತಿಷ್ಟು ಸಮಯ ಬಿಟ್ಟು ಹೋಗಿ ಮೀನುಗಾರಿಕೆ ನಡೆಸುತ್ತೇವೆ. ಮಾನವ ಶಕ್ತಿಯಿಂದಲೇ ಚಲಿಸುವ ದೋಣಿಗಳನ್ನು ಮೀನುಗಾರಿಕೆಗೆ ಬಳಸುತ್ತೇವೆ” ಎಂದು ಹೇಳಿದರು.

ಮಳೆಗಾಲದಲ್ಲಿ “ಮರಣ ಬಲೆ” ಉಪಯೋಗಿಸಿ ಹಲವು ಮಂದಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿದರೆ, ಇನ್ನು ಕೆಲವರು ಕೈರಂಪಣಿ ಮೀನುಗಾರಿಯಲ್ಲಿ ತೊಡಗಿಕೊಳ್ಳುತ್ತಾರೆ. ಬೀಸು ಬಲೆಯ ಮುಖಾಂತರ ಮೀನುಗಾರಿಕೆ ನಡೆಸುವವರೂ ಇದ್ದಾರೆ‌. ಒಟ್ಟಿನಲ್ಲಿ ಜೂನ್ 1 ರ ನಂತರ ಬಹುತೇಕ ಯಾಂತ್ರಿಕೃತ ಮೀನುಗಾರಿಕೆಗೆ ಸರಕಾರ ಮೂರು ತಿಂಗಳು ನಿಷೇಧ ಹೇರುತ್ತದೆ. ಇಂತಹ ಸಂದರ್ಭದಲ್ಲಿ  ಕೇವಲ 2-10ಅಶ್ವಶಕ್ತಿಯ ನಾಡದೋಣಿಗಳನ್ನು ಬಳಸಿ ಮೀನುಗಾರಿಕೆ ಮಾಡಲು ಪರವಾನಗಿ ಇದೆ. 

1001065057 Udupi

ಮಳೆಗಾಲದ ಸಂದರ್ಭದಲ್ಲಿ ವರ್ಷಪೂರ್ತಿ ದುಡಿಯುವ ಬೋಟ್ ಗಳ ಸ್ವಚ್ಚತಾ ಕಾರ್ಯ, ಬಲೆಗಳ ರಿಪೇರಿ ಕಾರ್ಯ ಜೋರಾಗಿ ನಡೆಯುತ್ತದೆ. ಮಳೆಗಾಲದಲ್ಲಿ ಬಹುತೇಕ ಮೀನುಗಾರರು ಮನೆಯಲ್ಲಿರುವ ಕಾರಣ ಶುಭ ಕಾರ್ಯಗಳ ಭರಾಟೆಯೂ ಜೋರಾಗಿರುತ್ತದೆ. ಈ ಬಾರಿ ಜೂನ್ 1 ರಿಂದ ಕೇರಳದ ಕರಾವಳಿ ತೀರಕ್ಕೆ ಮಾನ್ಸೂನ್ ಮಾರುತಗಳು ಪ್ರವೇಶಿಸಲಿದ್ದು ಕರ್ನಾಟಕ ಕರಾವಳಿ ಸೇರಿದಂತೆ ಮಳೆಗಾಲದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಾರಿಯ ಮಳೆಗಾಲ ಸಾಂಪ್ರದಾಯಿಕ ಮೀನುಗಾರಿಕೆಗೆ ಪೂರಕವಾಗಿರಲಿ ಎಂದು ಮೀನುಗಾರರು ಪ್ರಾರ್ಥಿಸುತ್ತಿದ್ದಾರೆ.

ಮೀನಿನ ಸಂತಾನೋತ್ಪತ್ತಿ:   ಜೂನ್ ತಿಂಗಳ ಅಂತ್ಯದೊಳಗೆ ಒಳ್ಳೆಯ ಮಳೆಯಾದರೆ, ನದಿ ಮೂಲಕ ಮಳೆ ನೀರು ಕಡಲ ಒಡಲು ಸೇರುತ್ತದೆ. ಕಡಲು ಕಲುಷಿತವಾಗಿ ನದಿ ಮೂಲಕ ಕಡಲು ಸೇರಿದ ಕೆಂಪು ನೀರಿನ ವಾಸನೆಗೆ ಮೀನು ಮೊಟ್ಟೆ ಇಡಲು ಧಾವಿಸಿ ಬರುತ್ತವೆ. ಆಳ ಸಮುದ್ರದಿಂದ ಸಂತಾನೋತ್ಪತ್ತಿಗೆ ಬರುವ ಮೀನು, ಸಾಗರ ಮತ್ತು ನದಿ ಸೇರುವ ಸಂಗಮಗಳಲ್ಲಿ ಇಲ್ಲವೇ ನದಿಯ ಇಕ್ಕೆಲಗಳಲ್ಲಿರುವ ಕಾಂಡ್ಲಾ ಗಿಡಗಳ ಅಡಿಯಲ್ಲಿ ಮೊಟ್ಟೆ ಇಡುತ್ತವೆ.

1001065054 Udupi

ಮೊಟ್ಟೆ ಇಟ್ಟ ಮೀನು ನಂತರ ಆಳ ಸಮುದ್ರಕ್ಕೆ ಹೊರಡಲು ಅಣಿಯಾಗುತ್ತವೆ. ಇಲ್ಲವೇ ಕೆಲವು ಜಾತಿಯ ಮೀನುಗಳು ಮೊಟ್ಟೆ ಹಾಕಿದ ಬಳಿಕ ಸಾಯುತ್ತವೆ. ಇದೇ ಸಂದರ್ಭದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಯುತ್ತಿರುವುದರಿಂದ ಈ ಮೀನುಗಳೇ ಮೀನುಗಾರರ ಬಲೆಗೆ ಬೀಳುತ್ತವೆ.


Latest Indian news

Popular Stories