ಮಲ್ಪೆ ಠಾಣೆಯ ಮಹಿಳಾ ಪೊಲೀಸ್ ಪಿಎಸೈ ರಾತ್ರಿ ರೌಂಡಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಗಾಂಜಾ ಆರೋಪಿ ಜೀವ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿ ಪೊಲೀಸ್ ಜೀಪಿಗೆ ಹನಿ ಮಾಡಿದ ಘಟನೆಯನ್ನು ಉಡುಪಿ ಯಶ್ ಪಾಲ್ ಸುವರ್ಣ ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲೆ ಸಹಿತ ಕರಾವಳಿಯಾದ್ಯಂತ ಮಾದಕ ದ್ರವ್ಯ ಜಾಲ ವ್ಯಾಪಕವಾಗಿ ಹಬ್ಬಿದ್ದು, ಯುವ ಜನಾಂಗ, ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿಕೊಂಡು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆತರುತ್ತಿದ್ದು ಪೊಲೀಸ್ ಇಲಾಖೆ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕು.
ಈಗಾಗಲೇ ಮಾದಕ ವಸ್ತುಗಳ ಜಾಲದ ಬಗ್ಗೆ ಹಲವು ದೂರುಗಳು ಕೇಳಿ ಬಂದಿದ್ದರೂ ಪೊಲೀಸ್ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದಾಗಿ ಇದೀಗ ಗಾಂಜಾ ಆರೋಪಿಗಳು ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿರುವುದು ಉಡುಪಿ ಜಿಲ್ಲೆಯ ಪಾಲಿಗೆ ತೀರ ದುರದೃಷ್ಟಕರ.
ಈ ಘಟನೆಯಿಂದಾಗಿ ಜಿಲ್ಲೆಯ ಜನತೆ ಆತಂಕಕ್ಕೀಡಾಗಿದ್ದು, ಗಾಂಜಾ ಆರೋಪಿಗಳು ಪೊಲೀಸ್ ಅಧಿಕಾರಿಗಳ ಮೇಲೆಯೇ ರಾಜಾರೋಷವಾಗಿ ಹಲ್ಲೆಗೆ ಮುಂದಾಗುವ ಮೂಲಕ ಪೊಲೀಸ್ ಇಲಾಖೆಯ ಬಗ್ಗೆ ಯಾವುದೇ ಹೆದರಿಕೆ ಇಲ್ಲ ಭಾವನೆ ಜನಸಾಮಾನ್ಯರಲ್ಲಿ ಮೂಡಿದೆ.
ಮಣಿಪಾಲ ಹಾಗೂ ಉಡುಪಿ ನಗರದ ವಿವಿಧೆಡೆ ಮಾದಕ ವಸ್ತುಗಳ ಜಾಲ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ತಕ್ಷಣ ಈ ಜಾಲವನ್ನು ಭೇದಿಸಿ ಈ ಮಾಫಿಯಾದ ರೂವಾರಿಗಳ ಹೆಡೆಮುರಿಕಟ್ಟಿ ಕೂಡಲೇ ಕಡಿವಾಣ ಹಾಕಲು ಮುಂದಾಗಬೇಕು.
ಮಾದಕ ಜಾಲದ ವಿರುದ್ಧ ಕಠಿಣ ಕ್ರಮದ ಮೂಲಕ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಪ್ರತ್ಯೇಕ ಮಾದಕ ದ್ರವ್ಯ ನಿಗ್ರಹ ದಳವನ್ನು ಆರಂಭಿಸುವಂತೆ ಗೃಹ ಸಚಿವರಿಗೆ ಮನವಿ ಮಾಡುವುದಾಗಿ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.