ಉಡುಪಿ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯನ ವಿರುದ್ಧ ರಾಜ್ಯ ಮಕ್ಕಳ ಆಯೋಗಕ್ಕೆ ದೂರು

ಉಡುಪಿ, ಜೂ.14: ಉಡುಪಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ, ನ್ಯಾಯವಾದಿ ಅಖಿಲ್ ಬಿ.ಹೆಗ್ಡೆ ಮಕ್ಕಳ ವಿರುದ್ಧ ಪ್ರಕರಣಗಳನ್ನು ತೆಗೆದು ಕೊಳ್ಳುತ್ತಿರುವ ಕುರಿತು ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ಸೂಚನೆ ನೀಡಿದೆ.

ಅಖಿಲ್ ಬಿ.ಹೆಗ್ಡೆ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟ ಬಾಲಕಿಯ ಪ್ರಕರಣದಲ್ಲಿ ಆರೋಪಿ ವಿರುದ್ಧ ವಕಾಲತ್ತು ಸಲ್ಲಿಸಿದ್ದು, ಒಂದನೇ ಆರೋಪಿ ಪರವಾಗಿ ನ್ಯಾಯಾಲಯದಲ್ಲಿ ಜಾಮೀನು ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಮೇಲೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಾಲಕಿಯ ತಂದೆ ಆಯೋಗಕ್ಕೆ ಮನವಿಯನ್ನು ಸಲ್ಲಿಸಿದ್ದರು.

ಅದೇ ರೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ಹೇಳಿಕೆಯನ್ನು ಪಡೆಯುವ ವೇಳೆ ಸದಸ್ಯರಾದ ಅಖಿಲ್ ಹೆಗ್ಡೆ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಹಾಜರಿದ್ದು, ಬಾಲಕಿಯನ್ನು ಹೆದರಿಸುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಇದರಿಂದ ಬಾಲಕಿಯು ಭಯಭೀತಳಾಗಿದ್ದಾಳೆ ಮತ್ತು ಈ ಹಿಂದೆಯೂ ಅನೇಕ ಪ್ರಕರಣ ಗಳಲ್ಲಿ ಈ ರೀತಿಯಾಗಿ ಅಖಿಲ್ ಹೆಗ್ಡೆ ನಡೆದುಕೊಂಡಿದ್ದಾರೆಂದು ಮನವಿಯಲ್ಲಿ ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯು ಸಂತ್ರಸ್ತ ಮಕ್ಕಳಿಗೆ ನ್ಯಾಯ ಒದಗಿಸುವ ಪ್ರಮುಖ ಸಂಸ್ಥೆಯಾಗಿದ್ದು, ಇಂತಹ ಜವಾಬ್ದಾರಿ ಸ್ಥಾನದಲ್ಲಿದ್ದು ಕೊಂಡು ಆರೋಪಿ ಪರವಾಗಿ ವಕಾಲತ್ತು ಸಲ್ಲಿಸಿ, ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಪ್ರಕರಣಕ್ಕೆ ಹಿನ್ನಡೆ ಉಂಟಾಗುತ್ತದೆ ಎಂದು ಆಯೋಗವು ಅಭಿಪ್ರಾಯ ಪಟ್ಟಿದೆ. ಆದುದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗವು ಉಡುಪಿ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಅಖಿಲ್ ಬಿ.ಹೆಗ್ಡೆ ಮೇಲೆ ನಿಯಮಾನುಸಾರ ಕಾನೂನು ರೀತಿಯ ಕ್ರಮ ಕೈಗೊಂಡು ಮೂರು ದಿನಗಳ ಒಳಗಾಗಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ಆಯೋಗದ ಅಧ್ಯಕ್ಷರು ತಿಳಿಸಿದ್ದಾರೆ

Latest Indian news

Popular Stories