ಉಡುಪಿ, ಆ.13: ಉಡುಪಿ ನಗರಸಭೆ ವ್ಯಾಪ್ತಿಯ ಹಾಗೂ ಗ್ರಾಮಾಂತರ ಪ್ರದೇಶಗಳ ರಸ್ತೆಯನ್ನು ಕೂಡಲೇ ದುರಸ್ತಿ ಮಾಡುವಂತೆ ಆಗ್ರಹಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿಗೆ ಮನವಿ ಸಲ್ಲಿಸಲಾಯಿತು.
ಉಡುಪಿ ನಗರದ ಸುತ್ತಮುತ್ತಲಿನ ಹಾಗೂ ರಾಜ್ಯದ ಪ್ರಮುಖ ಮೀನು ಗಾರಿಕಾ ಬಂದರು ಮತ್ತು ಪ್ರವಾಸಿ ತಾಣ ಮಲ್ಪೆಯ ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಅಲ್ಲದೇ ನಗರ, ಗ್ರಾಮಾಂತರ ಭಾಗಗಳ ಹೆದ್ದಾರಿ ಸ್ಥಿತಿ ಅಯೋಮಯವಾಗಿದೆ ಎಂದು ಮನವಿ ಯಲ್ಲಿ ದೂರಲಾಗಿದೆ.
ಆದುದರಿಂದ ಹೊಂಡಮಯವಾಗಿರುವ ರಸ್ತೆಗಳನ್ನು ಮುಚ್ಚಿ ಸಂಚಾರಕ್ಕೆ ಯೋಗ್ಯವನ್ನಾಗಿಸುವ ನಿಟ್ಟಿನಲ್ಲಿ ತಕ್ಷಣ ಉಡುಪಿ ನಗರಸಭೆಗೆ, ಪಂಚಾಯತ್ ವ್ಯಾಪ್ತಿಯ ಅಧಿಕಾರಿಗಳಿಗೆ ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರಕ್ಕೆ ಆದಷ್ಟು ಬೇಗನೆ ದುರಸ್ತಿ ಮಾಡಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ಗಣೇಶ್ ನೆರ್ಗಿ, ಸತೀಶ್ ಕುಮಾರ್ ಮಂಚಿ, ಶರತ್ ಶೆಟ್ಟಿ, ಸತೀಶ್ ಕೊಡವೂರು, ಶಶಿರಾಜ್ ಕುಂದರ್, ಆನಂದ ಪೂಜಾರಿ, ಮೀನಾಕ್ಷಿ ಮಾಧವ, ಕೃಷ್ಣ ಹೆಬ್ಬಾರ್, ಜ್ಯೋತಿ ಹೆಬ್ಬಾರ್, ಮಮತಾ ಶೆಟ್ಟಿ, ಸಂಧ್ಯಾ ತಿಲಕರಾಜ್, ಸತೀಶ್ ಪುತ್ರನ್, ಹಮ್ಮದ್, ಸುರೇಂದ್ರ ಆಚಾರ್ಯ, ಸದಾನಂದ ಮೂಲ್ಯ ಅರ್ಚನಾ ದೇವಾಡಿಗ, ಆಶಾ ಚಂದ್ರಶೇಖರ್, ಹಸನ್ ಅಜ್ಜರಕಾಡು ಮೊದಲಾದವರು ಉಪಸ್ಥಿತರಿದ್ದರು