ಸೂಕ್ತ ಸ್ಥಾನಮಾನದ ನಿರೀಕ್ಷೆಯಲ್ಲಿದ್ದ ಪ್ರಮೋದ್ ಮಧ್ವರಾಜ್’ಗೆ ನಿರಾಸೆ; ಕೈಗೆ ವಾಪಸಾಗುವರೇ ಮಾಜಿ ಸಚಿವರು?

ವಿಧಾನ ಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಬಹಳಷ್ಟು ನಿರಾಶೆಗೊಳಪಟ್ಟಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಪಕ್ಷ ಸೇರಿದ್ದರು. ಬಿಜೆಪಿ ಸೇರುವ ಹೊತ್ತಿಗೆ ತೀರಾ ದುರ್ಬಲ ಸ್ಥಿತಿಯಲ್ಲಿದ್ದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟವೇ ಸರಿಯೆಂಬ ಲೆಕ್ಕಾಚಾರ ಅವರಲ್ಲಿತ್ತು. ಅದರೊಂದಿಗೆ ಅವರು ಪ್ರತಿನಿಧಿಸುವ ಮೊಗವೀರ ಸಮುದಾಯದ ದೊಡ್ಡ ಮತ ಬಿಜೆಪಿಯ ಒಲವು ಹೊಂದಿರುವುದು ಪಕ್ಷ ಬದಲಾವಣೆಗೆ ಪ್ರಮುಖ ಕಾರಣವಾಗಿತ್ತು. ಕಾಂಗ್ರೆಸ್ ನಲ್ಲಿರುವಾಗಲೇ ಪ್ರಧಾನಿ ಮೋದಿಯನ್ನು ಹೊಗಳಿ ಬಿಜೆಪಿಗೆ ತೆರಳುವ ಸಿದ್ಧತೆ ಮಾಡಿಕೊಂಡಿದ್ದ ಮಧ್ವರಾಜ್’ಗೆ ಅಲ್ಲಿ ಹೋದ ಮೇಲೆ ಸೂಕ್ತ ಸ್ಥಾನಮಾನ ಸಿಗದಿರುವುದು ಕಳವಳ ಸೃಷ್ಟಿಸಿದೆ.

ಇದೀಗ ತಾವು ಬಿಜೆಪಿ ಘೋಷಿಸಿದ ಅಭ್ಯರ್ಥಿ ಪರ ಕೆಲಸ ಮಾಡುವುದಾಗಿ ಹೇಳಿಕೆ ನೀಡಿದ್ದರೂ ಒಳಗಿಂದೊಳಗೆ ಅಸಮಾಧಾನ ಖಂಡಿತ ಇದೆ, ಅದು ಸಹಜ ಕೂಡ. ರಾಜಕೀಯದಲ್ಲಿ ಮಹತ್ವಾಕಾಂಕ್ಷಿಯಾಗಿರುವ ಪ್ರಮೋದ್ ಮಧ್ವರಾಜ್ ಪ್ರಥಮ ಗೆಲುವಿನಲ್ಲೇ ಸಚಿವರಾಗಿದ್ದರು. ಅವರ ಸಮಯದಲ್ಲಿ ಉಡುಪಿ ಕ್ಷೇತ್ರದಲ್ಲಿ ಒಳ್ಳೆಯ ಅಭಿವೃದ್ಧಿ ಕಾರ್ಯಗಳು ನಡೆದಿತ್ತು. ಇದಕ್ಕೆ ಪ್ರಮುಖ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ನೀಡುವಲ್ಲಿ ತೋರಿದ ಔದಾರ್ಯವೂ ಪ್ರಮುಖ ಕಾರಣ. ತದ ನಂತರ ಸತತ ಎರಡು ಬಾರಿ ಸೋತು ಇನ್ನೇನು ಕಾಂಗ್ರೆಸ್ ಉಡುಪಿ ಜಿಲ್ಲೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಅನಿಸಿದಾಗ ಬಿಜೆಪಿ ಮುಖಂಡರ ಕಾರ್ಯಕರ್ತರ ವಿರೋಧದ ನಡುವೆ ಬಿಜೆಪಿ ಸೇರಿದ್ದು ಇತಿಹಾಸ.

ಬಿಜೆಪಿ ಸೇರಿದ ಮೇಲೆ ಮತ್ತೆ ರಾಜಕೀಯ ಪುನರುಜ್ಜೀವನಕ್ಕಾಗಿ ಕಾಯುತ್ತಿದ್ದ ಪ್ರಮೋದ್ ಮಧ್ವರಾಜ್ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಬಹುದೆಂಬ ನಿರೀಕ್ಷೆಯಿತ್ತು. ಆದರೆ ಅಲ್ಲಿ ಯಶ್ಫಾಲ್ ಸುವರ್ಣರಿಗೆ ಟಿಕೆಟ್ ಘೋಷಣೆಯಾದ ನಂತರ ಕಾರ್ಯಕರ್ತನಾಗಿ ಪಕ್ಷ ಹೇಳಿದ ಹಾಗೆ ಕರ್ತವ್ಯ ಮಾಡುವುದಾಗಿ ತಿಳಿಸಿದ್ದರು. ಆದರೆ ಈ ಬಾರಿ ಸ್ವಲ್ಪ ಮುಂದೆ ಹೋಗಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷೆ ವ್ಯಕ್ತಪಡಿಸಿದ್ದರು. ಮೀನುಗಾರ ಮುಖಂಡರು ಕೂಡ ಪ್ರಮೋದ್ ಮಧ್ವರಾಜ್’ಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಪತ್ರಿಕಾಗೋಷ್ಠಿ ನಡೆಸಿದ್ದರು. ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಗೋ ಬ್ಯಾಕ್ ಅಭಿಯಾನ ನಡೆದಾಗ ಅದರ ಆರೋಪ ಕೂಡ ಮಧ್ವರಾಜ್ ಮೇಲೆ ಬಂದಿತ್ತು. ಹೊರಗಿನಿಂದ ಬಂದವರು ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಆದರೆ ಇದೀಗ ಶೋಭಾ ಕರಂದ್ಲಾಜೆ ಟಿಕೆಟ್ ಗಿಟ್ಟಿಸುವಲ್ಲಿ ಸಫಲರಾಗಿದ್ದಾರೆ. ಕ್ಷೇತ್ರ ಬದಲಾಗಿದೆ ಆದರೆ ಪ್ರಮೋದ್ ಮಧ್ವರಾಜ್’ಗೆ ಭಾರೀ ನಿರಾಸೆಯಾಗಿದೆ. ಈತನ್ಮಧ್ಯೆ ಫಿನಿಕ್ಸ್ ನಂತೆ ಎದ್ದಿರುವ ಕಾಂಗ್ರೆಸ್ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಸಿದ್ಧವಾಗಿದೆ. ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರಿದ ನಂತರ ಎರಡನೇ ಹಂತದ ನಾಯಕರು ಕೂಡ ಹುಟ್ಟಿ ಕೊಂಡಿದ್ದಾರೆ. ಹಲವು ನಾಯಕರು ಸಕ್ರಿಯವಾಗಿ ಕಾಂಗ್ರೆಸ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಪ್ರಮೋದ್ ಮಧ್ವರಾಜ್ ವಾಪಸು ಕಾಂಗ್ರೆಸ್’ಗೆ ಬಂದರೂ ಎರಡನೇ ಹಂತದ ನಾಯಕತ್ವದೊಂದಿಗೆ ತಿಕ್ಕಾಟ ಖಂಡಿತ ಎದುರಿಸಬೇಕಾಗುತ್ತದೆ. ಆದರೆ ಹೈಕಮಾಂಡ್ ಮತ್ತು ರಾಜ್ಯ ನಾಯಕರೊಂದಿಗೆ ಸಂಪರ್ಕ ಹೊಂದಿರುವುದರಿಂದ ಅವರಿಗೆ ಮತ್ತೆ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಟಿಕೆಟ್ ಗಿಟ್ಟಿಸಿಕೊಳ್ಳುವುದು ಕಷ್ಟವೆನಲ್ಲ..ಆದರೆ ಬಿಜೆಪಿಯಲ್ಲಿ ಮಾತ್ರ ಸದ್ಯಕ್ಕೆ ಸೂಕ್ತ ಸ್ಥಾನಮಾನ ಅದರಲ್ಲೂ ಟಿಕೆಟ್ ಗಿಟ್ಟಿಸಿಕೊಳ್ಳುವ ಸಾಧ್ಯತೆ ತೀರಾ‌ ಕಡಿಮೆ. ವಿಧಾನ ಪರಿಷತ್ ಸದಸ್ಯ ಸ್ಥಾನ ಕೂಡ ನಿರೀಕ್ಷಿಸುವುದು ಕಷ್ಟವೇ ಸರಿ. ಈ ಎಲ್ಲ ಲೆಕ್ಕಚಾರಗಳ ನಡುವೆ ಪ್ರಮೋದ್ ಮಧ್ವರಾಜ್ ಬ್ಯಾಕ್ ಟು ಕಾಂಗ್ರೆಸ್’ಗೆ ಬಂದರೆ ಅಚ್ಚರಿಯೇನಿಲ್ಲ…ಏನಂತೀರಾ?

Latest Indian news

Popular Stories