ಸಂಸದೆ ಶೋಭಾ ಕರಂದ್ಲಾಜೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮೀನುಗಾರ ಮುಖಂಡರು – “ನಿಮಗೆ 10 ವರ್ಷಗಳಿಂದ ಮತ ಹಾಕಿದ್ದಕ್ಕೆ ನೀವು ನಮಗೆ ಏನು ಮಾಡಿದ್ದೀರಿ”?

ಉಡುಪಿ: ಮಲ್ಪೆ ಬಂದರನ್ನು ಸಂಪರ್ಕಿಸುವ ಪ್ರಮುಖ ಕರಾವಳಿ ಬೈಪಾಸ್- ಮಲ್ಪೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಇಂದು ಉಡುಪಿ ಪ್ರವಾಸಿ ಮಂದಿರದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳ ಸಭೆಯಲ್ಲಿ ಉಡುಪಿ- ಚಿಕ್ಕಮಗಳೂರು ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಮೀನುಗಾರ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ಕರೆಯಲಾದ ಸಭೆ ಆರಂಭವಾಗುತ್ತಿದ್ದಂತೆ ಮಾತು ಆರಂಭಿಸಿದ ಮೀನುಗಾರ ಮುಖಂಡ ಕಿಶೋರ್ ಡಿ.ಸುವರ್ಣ, ಸಂತೆಕಟ್ಟೆ, ಕಟಪಾಡಿ, ಅಂಬಲಪಾಡಿ ಜಂಕ್ಷನ್‌ಗಳಲ್ಲಿ ಜನ ಈಗ ರಸ್ತೆ ದಾಟಲು ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ. ಆ ರೀತಿ ಈ ರಸ್ತೆ ಆಗ ಬಾರದು. ಆದುದರಿಂದ ಕಾಮಗಾರಿ ಆರಂಭಿಸುವ ಮೊದಲೇ ಎಲ್ಲವನ್ನು ಸರಿ ಮಾಡಬೇಕು. ಚುನಾವಣೆ ಬಂದಾಗ ಎರಡು ಮೂರು ಮರ ಕಡಿದು ರಸ್ತೆ ಕಾಮಗಾರಿ ಆರಂಭಿಸುವ ನಾಟಕ ಮಾಡಲಾಗುತ್ತಿದೆ. ಈ ಮೂಲಕ ಜನರಿಗೆ ಮೋಸ ಮಾಡುವುದು ಸರಿಯಲ್ಲ. ಇದರ ವಿರುದ್ಧ ಜನ ರೊಚ್ಚಿಗೆದಿದ್ದಾರೆ. ಮುಂದೆ ಇದರ ವಿರುದ್ಧ ಯಾವ ರೀತಿ ಪ್ರತಿಭಟನೆ ವ್ಯಕ್ತವಾಗುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ. ಇಲ್ಲಿ ಸರಕಾರವೇ ಜನರಿಗೆ ಮೋಸ ಮಾಡು ತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಾವು ನಿಮ್ಮ ಮೇಲೆ ವಿಶ್ವಾಸ ಇಟ್ಟು ಮತ ಹಾಕಿ ಗೆಲ್ಲಿಸಿದ್ದೇವೆ. ಆದರೆ ನೀವು ನಮ್ಮ ಮೇಲೆ ವಿಶ್ವಾಸ ಇಟ್ಟಿಲ್ಲ. ನಿಮಗೆ 10 ವರ್ಷಗಳಿಂದ ಮತ ಹಾಕಿದ್ದಕ್ಕೆ ನೀವು ನಮಗೆ ಏನು ಮಾಡಿದ್ದೀರಿ. ರಸ್ತೆಯಲ್ಲಿ ಭೂಮಿ ಕಳೆದುಕೊಳ್ಳುವವರನ್ನು ಸೇರಿಸಿ ಈವರೆಗೆ ಒಂದೇ ಒಂದು ಸಭೆ ಕರೆದಿಲ್ಲ. ನೀವು ನಮ್ಮ ಜನಪ್ರತಿನಿಧಿ ಅಲ್ಲವೇ ನಿಮಗೆ ಕರ್ತವ್ಯ ಇಲ್ಲವೇ ಜನರನ್ನು ಯಾಕೆ ನೀವು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಅವರು ಕಿಡಿಕಾರಿದರು.

ಕೋಟ್ಯಂತ ರೂ. ಆದಾಯ ಬರುವ ಮತ್ತು ಲಕ್ಷಾಂತರ ಮಂದಿಗೆ ಉದ್ಯೋಗ ನೀಡುವ ಕೇಂದ್ರವಾಗಿರುವ ಮಲ್ಪೆ ಬಂದರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತ ಸರ್ವೆ, ಅಗಲ, ಉದ್ದ ಮತ್ತು ಪರಿಹಾರದ ಬಗ್ಗೆ ಜನರಿಗೆ ಸಾಕಷ್ಟು ಗೊಂದಲಗಳಿವೆ. ಇದರ ವಿರುದ್ಧ ಹಲವು ಮಂದಿ ಕೋರ್ಟ್‌ಗೆ ಹೋಗಿದ್ದಾರೆ ಎಂದರು.

ಇಲ್ಲಿ ಪರಿಹಾರ ಕಾರ್ಯ ಕೂಡ ವೈಜ್ಞಾನಿಕ ನಡೆದಿಲ್ಲ. ಹಣಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರ ಸಚಿವರು ಹೇಳಿ ದ್ದಾರೆ. ಆದರೆ ಕೋಟ್ಯಂತ ರೂ. ಆದಾಯ ಇರುವ ಈ ರಸ್ತೆಗೆ ಸಂಬಂಧಿಸಿ ಪರಿಹಾರಕ್ಕೆ ಕೇವಲ 50 ಕೋಟಿ ರೂ. ಕೊಡಲು ಹಿಂದೇಟು ಹಾಕುವುದರಲ್ಲಿ ಅರ್ಥ ಇದೆಯೇ ಎಂದು ಅವರು ಸಂಸದೆ ವಿರುದ್ಧ ಕಿಡಿಕಾರಿದರು.

ಗೂಟದ ಕಾರಿನಲ್ಲಿ ಹೋಗುವ ನಿಮಗೆ ಇಲ್ಲಿನ ಕಷ್ಟ ಅರ್ಥ ಆಗುವುದಿಲ್ಲ. ಜನ ಸಾಮಾನ್ಯರು ಈ ರಸ್ತೆಯಿಂದ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ವಾರಾಂತ್ಯದಲ್ಲಿ ಅಂತೂ ಈ ರಸ್ತೆಯಲ್ಲಿ ಹೋಗುವ ಪರಿಸ್ಥಿತಿ ಇಲ್ಲ. ನೀವು ಇಲ್ಲಿಯ ಜನರಿಗೆ ಮೋಸ ಮಾಡುತ್ತಿದ್ದೀರಿ. ಅತೀ ಅಗತ್ಯವಾಗಿರುವ ಮಲ್ಪೆ ರಸ್ತೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿ, ಅಗತ್ಯವೇ ಇಲ್ಲದ ಪೆರ್ಡೂರು, ಹೆಬ್ರಿ, ತೀರ್ಥಹಳ್ಳಿ ರಸ್ತೆಯನ್ನು ಅತ್ಯಂತ ಆದ್ಯತೆಯಲ್ಲಿ ಮಾಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಸದಸ್ಯರಾದ ಯೋಗೀಶ್ ಸಾಲ್ಯಾನ್, ಸುಂದರ ಕಲ್ಮಾಡಿ ಮಾತನಾಡಿ, ನಮಗೆ ಜನರ ಬಳಿ ಹೋಗಲು ಭಯ ಆಗುತ್ತದೆ. ಆ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ನಮ್ಮ ಮಾನ ಹರಾಜು ಮಾಡುತ್ತಿದ್ದಾರೆ. ಒಂದು ತಿಂಗಳಲ್ಲಿ ಸರ್ವೆ ಮಾಡುವುದಾಗಿ ಹೇಳಿ, ಇನ್ನೂ ಮಾಡಿಲ್ಲ. ಈ ರಸ್ತೆಯಲ್ಲಿ ಸಾಗಿದರೆ ನಮಗೆ ಬೆನ್ನು ನೋವು ಬರುತ್ತೆ. ಮೂರು ಕಿ.ಮೀ. ರಸ್ತೆ ಈ ದೇಶದಲ್ಲಿ ಇಲ್ಲವೇ ಎಂದು ಜನ ಕೇಳುತ್ತಾರೆ ಎಂದು ಸಭೆಯಲ್ಲಿ ಆರೋಪಿಸಿದರು.

ಸಭೆಯಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಕುಂದಾಪುರ ಉಪವಿಭಾಗಾಧಿ ಕಾರಿ ರಶ್ಮಿ, ಪೌರಾಯುಕ್ತ ರಾಯಪ್ಪ, ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳು ಹಾಜರಿದ್ದರು.

‘ನೀವು 10 ವರ್ಷಗಳ ಹಿಂದೆ ಪ್ರಥಮ ಬಾರಿ ಗೆದ್ದು ಬಂದಾಗ ಏನು ಬೇಕು ಕೇಳಿದಾಗ, ನಾವೆಲ್ಲ ಬಂದರಿಗೆ ಒಳ್ಳೆಯ ರಸ್ತೆ ಮಾಡಿಕೊಡುವಂತೆ ಕೇಳಿದ್ದೇವೆ. ಎರಡನೇ ಬಾರಿ ಚುನಾವಣೆಗೆ ನಿಂತಾಗ ಈ ರಸ್ತೆ ಮಾಡದಿದ್ದಕ್ಕೆ ನಿಮ್ಮ ವಿರುದ್ಧ ಗೋಬ್ಯಾಕ್ ಚಳವಳಿ ನಡೆಯಿತು. ನಂತರ ಕೂಡಲೇ ರಸ್ತೆ ಮಾಡುವ ಭರವಸೆ ನೀಡಿದ್ದೀರಿ. ಮತ್ತೆ ಗೆದ್ದು ಬಂದಾಗಲೂ ಅದೇ ಭರವಸೆ ನೀಡಿದ್ದೀರಿ. ಇದೀಗ ಮತ್ತೆ ಭರವಸೆ ಮಾತುಗಳನ್ನು ಹೇಳಿದ್ದೀರಿ. ನೀವು ಹೀಗೆ ಹೇಳುತ್ತಿದ್ದರೆ ಇನ್ನು 20 ವರ್ಷಗಳು ಕಳೆದರೂ ಈ ರಸ್ತೆ ಆಗುವುದಿಲ್ಲ’

-ಕಿಶೋರ್ ಡಿ.ಸುವರ್ಣ, ಮೀನುಗಾರ ಮುಖಂಡರು

‘ಕೇಂದ್ರ ಸರಕಾರದ ಯೋಜನೆಗೆ ಜಿಲ್ಲಾಧಿಕಾರಿಗಳು ಭೂಮಿ ಸರ್ವೆ ಮಾಡಿ ಕೊಡದಿದ್ದರೆ ನಾವು ಏನು ಮಾಡಲು ಆಗುವುದಿಲ್ಲ. ಆದಿಉಡುಪಿ- ಮಲ್ಪೆ ರಸ್ತೆಯನ್ನು ಸರಿಯಾಗಿ ಅಳತೆ ಮಾಡಿಕೊಟ್ಟರೆ ಈಗಿನ ದರದಲ್ಲೇ ಪರಿಹಾರ ನೀಡಲಾಗುವುದು’

-ಶೋಭಾ ಕರಂದ್ಲಾಜೆ, ಸಂಸದೆ

Latest Indian news

Popular Stories