ಉಡುಪಿ: ಜಂತುಹುಳುಗಳಿAದ ಮಕ್ಕಳ ದೇಹದಲ್ಲಿ ರಕ್ತಹೀನತೆ ಹಾಗೂ ಅಪೌಷ್ಠಿಕತೆ ಉಂಟಾಗಿ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಇದರ ನಿವಾರಣೆಗೆ 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್ ತಿಳಿಸಿದರು.
ಅವರು ಇಂದು ರಾಷ್ಟಿ್ಯ ಜಂತುಹುಳು ನಿವಾರಣಾ ದಿನಾಚರಣೆ ಕುರಿತು ವರ್ಚುವಲ್ ಮೂಲಕ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು.
ಸಾಮಾನ್ಯವಾಗಿ ಜಂತುಹುಳುವು 1-19 ವರ್ಷದ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ಹೊಟ್ಟೆನೋವು, ಬೇಧಿ, ಹಸಿವಿಲ್ಲದಿರುವುದು ಹಾಗೂ ಸುಸ್ತು ಇಂತಹ ಲಕ್ಷಣಗಳು ಕಂಡುಬರುವುದರ ಜೊತೆಗೆ ರಕ್ತಹೀನತೆ, ಪೌಷ್ಠಿಕ ಆಹಾರದ ಕೊರತೆ ಉಂಟಾಗಿ ದೈಹಿಕ ಹಾಗೂ ಭೌತಿಕ ಬೆಳವಣಿಗೆ ತೊಂದರೆ ಕಾಣಿಸಿಕೊಳ್ಳುತ್ತದೆ. ಜಂತುಹುಳು ನಿವಾರಣೆಗೆ ಅಲ್ಬೆಂಡಜೋಲ್ ಮಾತ್ರೆಗಳನ್ನು ವಿತರಿಸಲಾಗುತ್ತಿದೆ ಎಂದರು.
ಜಂತುಹುಳುಗಳು ನೈರ್ಮಲ್ಯ ಹಾಗೂ ವೈಯಕ್ತಿಕ ಶುಚಿತ್ವದ ಕೊರತೆ, ಜಂತುಹುಳು ಸೋಂಕಿನ ಮಣ್ಣನ್ನು ಸ್ಪರ್ಶಿಸುವುದರಿಂದ ಜಂತುಹುಳು ಬಾಧೆ ಹರಡುತ್ತದೆ. ಇದರಿಂದ ದೂರವಿರಲು ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿ, ಸ್ವಚ್ಛವಾಗಿಡುವುದು, ತಿಂಡಿ-ತಿನಿಸುಗಳನ್ನು ಮಾಡುವ ಮೊದಲು, ಶೌಚಾಲಯಗಳನ್ನು ಬಳಸಿದ ನಂತರ ಸಾಬೂನಿನಿಂದ ಕೈಗಳನ್ನು ತೊಳೆಯುವುದು, ಶುದ್ಧೀಕರಿಸಿದ ನೀರನ್ನು ಸೇವಿಸುವುದು, ಹಣ್ಣು-ಹಂಪಲು ತರಕಾರಿ ಚೆನ್ನಾಗಿ ತೊಳೆದು ಬಳಸುವುದು ಹಾಗೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿ ಇಟ್ಟುಕೊಂಡಲ್ಲಿ ಜಂತುಹುಳಗಳಿAದ ದೂರವಿರಲು ಸಾಧ್ಯ ಎಂದರು.
ಜಿಲ್ಲೆಯ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಯನ್ನು ಉಚಿತವಾಗಿ ಸರಕಾರಿ, ಅನುದಾನಿತ, ಖಾಸಗಿ ಶಾಲೆಗಳು, ಅಂಗನವಾಡಿ, ವಸತಿ ಶಾಲೆಗಳು, ಐ.ಟಿ.ಐ, ನರ್ಸಿಂಗ್, ಪದವಿ ಹಾಗೂ ವೃತ್ತಿಶಿಕ್ಷಣ ಕಾಲೇಜುಗಳ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಲ್ಲಿಯೇ ನೀಡಲಾಗುತ್ತಿದೆ. ಅಂಗನವಾಡಿ ಮಕ್ಕಳಿಗೆ ಹಾಗೂ ಶಾಲೆಯಿಂದ ಹೊರಗುಳಿದ 19 ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿಯಲ್ಲಿ ಮಾತ್ರೆಯನ್ನು ವಿತರಿಸಲಾಗುವುದು ಎಂದರು.
ಪ್ರತಿಶತಃ ನೂರರಷ್ಟು ಮಕ್ಕಳಿಗೆ ಮಾತ್ರೆ ವಿತರಣೆಗೆ ಶಿಕ್ಷಣ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳು ಸೇರಿದಂತೆ ಮತ್ತಿತರ ಇಲಾಖೆಗಳು ಸಮನ್ವಯದೊಂದಿಗೆ ಈ ಕಾರ್ಯವನ್ನು ಯಶಸ್ವಿಗೊಳಿಸಲು ಮುಂದಾಗಬೇಕು ಎಂದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಜೋಶ್ನಾ ಬಿ.ಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ವಿವಿಧ ಆರೋಗ್ಯಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.