Udupi

ಸರ್ಕಾರಿ ಸ್ವಾಯತ್ತೆ ಸಂಸ್ಥೆಗಳನ್ನು ಖಾಸಗೀಕರಣದಿಂದ ದೂರ ಇರಿಸಬೇಕು | RSS ಸಲ್ಲಿಸಿದ ಬೇಡಿಕೆಗಳ ವಿವರ

ನವದೆಹಲಿ: ಮಧ್ಯಮ ವರ್ಗಕ್ಕೆ ನೆರವು, ಚೀನಾದ ಉತ್ಪಾದನೆಗಳಾದ ಛತ್ರಿ ಮತ್ತು ಪಾದರಕ್ಷೆ ಮೇಲೆ ಸುಂಕ ವಿಧಿಸುವುದು, ಉತ್ಪಾದನೆಗೆ ಸಂಬಂಧಿಸಿದಂತೆ ಪ್ರೋತ್ಸಾಹ ನೀಡುವ ಮೂಲಕ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಪ್ರೋತ್ಸಾಹ, ಶಿಕ್ಷಣ ಹಾಗೂ ತರಬೇತಿ ಉದ್ದೇಶಗಳಿಗೆ ಹೆಚ್ಚಿನ ಅನುದಾನ ಮೀಸಲಿಡುವುದು ಸೇರಿದಂತೆ ಹಲವು ಅಂಶಗಳಿಗೆ 2025ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಅದ್ಯತೆ ನೀಡುವಂತೆ ಆ‌ರ್ ಎಸ್ ಎಸ್ (RSS) ಬೇಡಿಕೆ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.

ಆರ್ ಎಸ್ ಎಸ್ ಹಾಗೂ ಅಂಗಸಂಸ್ಥೆಗಳಾದ ಲಘು ಉದ್ಯೋಗ್‌ ಭಾರತಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಸ್ವದೇಶಿ ಜಾಗರಣ್ ಮಂಚ್ ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಬಜೆಟ್ ನಲ್ಲಿ ಪ್ರಾಮುಖ್ಯತೆ ನೀಡಬೇಕಾದ ಅಂಶಗಳ ಬಗ್ಗೆ ಮನವಿ ಸಲ್ಲಿಸಿರುವುದಾಗಿ ವರದಿ ವಿವರಿಸಿದೆ.

ದೇಶದಲ್ಲಿ ಆಮೂಲಾಗ್ರ ಸುಧಾರಣೆಯ ನಡುವೆಯೂ ತೆರಿಗೆ ಸಂಗ್ರಹವನ್ನು ಇನ್ನಷ್ಟು ಹೆಚ್ಚಿಸಬೇಕು, ಆದಾಯ ನಿರ್ವಹಣೆ ಅತ್ಯಗತ್ಯವಾಗಿದೆ. ಮಧ್ಯಮ ವರ್ಗದ ಜನರ ಮೇಲೆ ಆರ್ಥಿಕ ಹೊರೆ ಬೀಳದಂತೆ ಏಚ್ಚರ ವಹಿಸಬೇಕು, ಸ್ಥಳೀಯ ಉದ್ಯಮಕ್ಕೆ ಉತ್ತೇಜನ ನೀಡಬೇಕು. ಸರ್ಕಾರಿ ಸ್ವಾಯತ್ತೆ ಸಂಸ್ಥೆಗಳನ್ನು ಖಾಸಗೀಕರಣದಿಂದ ದೂರ ಇರಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿನಂತಿಸಿಕೊಂಡಿದೆ.

ದೇಶದಲ್ಲಿನ ಮಧ್ಯಮ ವರ್ಗದ ಜೀವನ ನಿರ್ವಹಣೆ ವೆಚ್ಚ ಏರಿಕೆಯಾಗುತ್ತಿರುವ ಬಗ್ಗೆ ಆರ್ ಎಸ್ ಎಸ್ ನಿರಂತರವಾಗಿ ಕಳವಳ ವ್ಯಕ್ತಪಡಿಸುತ್ತಾ ಬಂದಿದ್ದು, ಮಧ್ಯಮ ವರ್ಗ ದೇಶದ ಆರ್ಥಿಕತೆಯ ಬೆನ್ನಲುಬು ಎಂದು ತಿಳಿಸಿದೆ.

ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ತೆರಿಗೆ ವಿನಾಯ್ತಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿನ ಹೆಚ್ಚುವರಿ ವೆಚ್ಚದ ಕಡಿತ ಹಾಗೂ ಹಣದುಬ್ಬರ ನಿಯಂತ್ರಣಕ್ಕೆ ಕಠಿನ ಕ್ರಮ ತೆಗೆದುಕೊಳ್ಳುವಂತೆ ಆರ್ ಎಸ್ ಎಸ್ ಮನವಿ ಮಾಡಿಕೊಂಡಿರುವುದಾಗಿ ವರದಿ ಹೇಳಿದೆ.

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button