“ಹೆಬ್ರಿ: ಸೋಮೇಶ್ವರ ಅಭಯಾರಣ್ಯದಲ್ಲಿರುವ ನಾಡ್ಪಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಾ ತಿಂಗಳೆ ಪರಿಸರದಲ್ಲಿ ಒಂಟಿ ಸಲಗ ಕಾಣಿಸಿ ಕೊಂಡಿದ್ದು, ಎರಡು ದಿನಗಳ ಹಿಂದೆ ಈ ಆನೆ ತೋಟ, ಗದ್ದೆಗಳಿಗೆ ದಾಳಿ ನಡೆಸಿದ ಪರಿಣಾಮ ಅಪಾರ ಬೆಳೆಗಳು ಹಾನಿಯಾಗಿರುವ ಬಗ್ಗೆ ವರದಿ ಯಾಗಿದೆ.
ಒಂದು ವರ್ಷಗಳ ಹಿಂದೆ ಕುದುರೆಮುಖ ಕೆರೆಕಟ್ಟೆ ಕಡೆಯಿಂದ ಬಂದು ಸೋಮೇಶ್ವರ ಅಭಯಾರಣ್ಯವನ್ನು ಸೇರಿಕೊಂಡಿ ರುವ ಆನೆಯು ಬಡಾ ತಿಂಗಳೆ ಪರಿಸರದ ಸುಮಾರು ಆರು ಕುಟುಂಬಗಳ ತೋಟ, ಗದ್ದೆಗಳಿಗೆ ನುಗ್ಗಿದೆ ಎನ್ನ ಲಾಗಿದೆ. ಇದರಿಂದ ಅಡಿಕೆ, ಭತ್ತ, ತೆಂಗು ಸೇರಿದಂತೆ ವಿವಿಧ ಬೆಳೆಗಳು ಹಾನಿ ಯಾಗಿವೆ ಎಂದು ತಿಳಿದುಬಂದಿದೆ.
‘ಈ ಆನೆ ನಾಲ್ಕೈದು ದಿನಗಳಿಂದ ಇಲ್ಲೇ ತಿರುಗಾಡುತ್ತಿದೆ. ಮೊನ್ನೆ ರಾತ್ರಿ 2.40ರ ಸುಮಾರಿಗೆ ಬಂದು ಅಡಿಕೆ ಸಸಿ, ಪೈಪ್‌ಲೈನ್‌ಗಳನ್ನು ಮುರಿದು ಹಾಕಿದೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಶಬ್ದ ಕೇಳಿ ಹೊರಗಡೆ ಬಂದಾಗ ಗದ್ದೆಯಲ್ಲಿ ಓಡಾಡುತ್ತಿತ್ತು. ಗದ್ದೆಯನ್ನು ಸಂಪೂರ್ಣ ಹಾಳು ಮಾಡಿ ಬಿಟ್ಟಿದೆ. ಅದೇ ರೀತಿ ಬಾಳೆಗಳನ್ನು ಕಿತ್ತು ತಿಂದಿದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸುಮಾರು 15-20 ವರ್ಷ ವಯಸ್ಸಿನ ಈ ಆನೆ ದಾಳಿಯಿಂದ ನಾಡ್ಪಾಲು ಗ್ರಾಪಂ ವ್ಯಾಪ್ತಿಯ ಬಡಾ ತಿಂಗಳೆ, ಮೇಗದ್ದೆ, ಬಿಡಾರು, ಪಜ್ಜೊಳ್ಳಿ ಗ್ರಾಮದ ಜನತೆ ತೀರಾ ಭೀತಿಗೆ ಒಳಗಾಗಿದ್ದಾರೆ. ಅರಣ್ಯ ಇಲಾಖೆಯವರು ಕೂಡಲೇ ಕಾರ್ಯಾಚರಣೆ ನಡೆಸುವ ಮೂಲಕ ಆನೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿರುವ ಅರಣ್ಯ ಇಲಾಖೆ ಕಾರ್ಕಳ ವನ್ಯ ಜೀವಿ ವಿಭಾಗದ ಉಪ ವಲಯ ಸಂರಕ್ಷಣಾಧಿ ಕಾರಿ ಶಿವರಾಮ ಬಾಬು, ಹೆಬ್ರಿ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಗೌರವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆ ದಾಳಿಯ ಹಿನ್ನೆಲೆಯಲ್ಲಿ ಈ ಗ್ರಾಮದಲ್ಲಿ ಇಲಾಖೆ ಸಿಬ್ಬಂದಿಗಳನ್ನು ಸುರಕ್ಷತೆಗಾಗಿ ನಿಯೋಜಿಸಲಾಗಿದೆ.