ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಜಯ ಪ್ರಕಾಶ್ ಹೆಗ್ಡೆ | ಪಕ್ಷ ತೊರೆದ ನಂತರವೂ ನಾನು ನಾಯಕರ ಜೊತೆ ಸಂಪರ್ಕದಲ್ಲಿ ಇದ್ದೆ ಎಂದ ಜೆ.ಪಿ ಹೆಗ್ಡೆ

ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಜಯಪ್ರಕಾಶ್ ಹೆಗ್ಡೆ ಇಂದು ಭೇಟಿ ನೀಡಿದರು. ಪಕ್ಷ ಸೇರ್ಪಡೆಯಾದ ಬಳಿಕ ಮೊದಲ ಬಾರಿಗೆ ಅವರು ಇಂದು ಭೇಟಿ ನೀಡಿದ್ದು ಅವರನ್ನು ಕಾಂಗ್ರೆಸ್ ನಾಯಕರು ಬರ ಮಾಡಿಕೊಂಡರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಜೆ.ಪಿ ಹೆಗ್ಡೆ, “ಪಕ್ಷ ತೊರೆದ ನಂತರವೂ ನಾನು ನಾಯಕರ ಜೊತೆ ಸಂಪರ್ಕದಲ್ಲಿ ಇದ್ದೆ. ಕಾಂಗ್ರೆಸ್ ಸ್ನೇಹಿತರ ಜೊತೆ, ಸ್ನೇಹಚಾರ ಬಿಟ್ಟಿಲ್ಲ ಎಂದರು. ರಾಜಕೀಯ ಹೊರತಾಗಿಯೂ ಒಂದು ಜೀವನ ಇದೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಜನರ ಅಭಿವೃದ್ಧಿ ಕಾರ್ಯಕ್ಕೆ ನಾವೆಲ್ಲರೂ ಒಟ್ಟಾಗುತ್ತಿದ್ದೆವು. ನಾನು ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಬೇಕು. ಎಲ್ಲರೂ ಜೊತೆಯಾಗಿ ಮುಂದಿನ ಚುನಾವಣೆಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.

ಚುನಾವಣೆಯಲ್ಲಿ ಗೆಲ್ಲಲು ಎಲ್ಲರೂ ಪ್ರಯತ್ನಿಸಬೇಕು. ಎರಡು ಜಿಲ್ಲೆಯ ಪದಾಧಿಕಾರಿಗಳನ್ನು ಒಟ್ಟು ಸೇರಿಸಿ ಒಂದು ಕಾರ್ಯಕ್ರಮ ಮಾಡಬೇಕು. ಟಿಕೆಟ್ ಯಾವಾಗ ಘೋಷಣೆಯಾಗುತ್ತೆ ಎಂಬುದನ್ನು ಪಕ್ಷದ ಮುಖಂಡರಿಗೆ ಕೇಳಬೇಕಾಗಿದೆ‌. ನನಗೆ ಟಿಕೆಟ್ ಸಿಗುವ ಬಗ್ಗೆ ಸಿದ್ದರಾಮಯ್ಯ ಜೊತೆ ನಾನು ಯಾವುದೇ ಚರ್ಚೆ ಮಾಡಿಲ್ಲ. ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಜಿಲ್ಲೆಯ ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಪರಿಹಾರ ಬೇಕು. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಜಂಟಿ ಸರ್ವೆ ಪ್ರಾರಂಭ ಆಗಿದೆಯಂತೆ. ಕರಾವಳಿ ಭಾಗದಲ್ಲಿ ಆದರೆ ರೈತರಿಗೆ ಸಹಾಯ ಆಗುತ್ತೆ ಎಂದು ಹೇಳಿದರು.

ಅನಾಥ ಮಕ್ಕಳ ಬಗ್ಗೆ ನಾನೊಂದು ವರದಿ ಕೊಟ್ಟಿದ್ದೇನೆ. ಅದನ್ನು ಅತಿ ಶೀಘ್ರ ಜಾರಿಗೆ ತರುವಂತೆ ಕೇಳಿದ್ದೇನೆ. ಸಂಪೂರ್ಣ ವರದಿಯನ್ನು ಜಾರಿಗೆ ತಂದರೆ ತುಂಬಾ ಸಂತೋಷ.ಅನೇಕ ಹಿಂದುಳಿದ ಜಾತಿಗಳಿಗೆ ಪಟ್ಟಿಯಲ್ಲಿ ಇರುವುದೇ ಗೊತ್ತಿರಲಿಲ್ಲ‌. ಅನೇಕ ಜನರಿಗೆ ನಮಗೆ ಮೀಸಲಾತಿ ಸಿಕ್ಕುತ್ತೆ ಅಂತಾನೆ ಗೊತ್ತಿಲ್ಲ. ವೀರಶೈವ ಲಿಂಗಾಯತರು ತಮಗೆ ಮೀಸಲಾತಿ ಇಲ್ಲ ಅಂತಾನೆ ಭಾವಿಸಿದ್ದರು.

ತಾವು ಪ್ರವರ್ಗ ಮೂರರಲ್ಲಿ ಬರುತ್ತೇವೆ ಅಂತಾನೆ ಗೊತ್ತಿರಲಿಲ್ಲ. ಅನೇಕ ಸಣ್ಣ ಪುಟ್ಟ ಜಾತಿಗಳು ಪಟ್ಟಿಯಲ್ಲಿ ಇರಲಿಲ್ಲ. ಎಷ್ಟು ಜಾತಿಗಳು ಮೀಸಲಾತಿಗೆ ಒಳಪಟ್ಟಿಲ್ಲ ಅನ್ನೋದು ಇದರಿಂದ ಗೊತ್ತಾಯ್ತು. ಮಾಡಿದ ಕೆಲಸದ ಬಗ್ಗೆ ತೃಪ್ತಿ ಇದೆ. ವರದಿಯ ಬಗ್ಗೆ ಚರ್ಚೆ ಇದೆ ನಿಜ.‌ ಸರ್ಕಾರ ವರದಿಯನ್ನು ಸ್ವೀಕರಿಸಿದ್ದರೆ ಲಾಭವಾಗುತ್ತಿತ್ತು ಅನಿಸುತ್ತೆ ಎಂದ ಅವರು, ಈ ವಿಚಾರ ಸರ್ಕಾರದ ತೀರ್ಮಾನಕ್ಕೆ ಬಿಟ್ಟದ್ದು ಎಂದರು.

ಬಿಜೆಪಿ ಅಭ್ಯರ್ಥಿ ಘೋಷಣೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಅವರ ಕೆಲಸವನ್ನು ಮಾಡುತ್ತದೆ, ನಾವು ನಮ್ಮ ಕೆಲಸ ಮಾಡುತ್ತೇವೆ. ನಾವು ಪಕ್ಷದ ಕೆಲಸ ಶುರು ಮಾಡಿದ್ದೇವೆ.ಜಾತಿಯ ಬಗ್ಗೆ ಚರ್ಚೆ ಮಾಡುವುದು ಕಮ್ಮಿ ಮಾಡಿದಷ್ಟು, ಸೌಹಾರ್ದಯುತವಾಗಿ ಕೆಲಸ ಮಾಡಬಹುದು ಎಂದರು.

ನನ್ನ ಜೊತೆ ಬಿಜೆಪಿ ಸೇರಿದ್ದ ಹೆಚ್ಚಿನವರು ವಾಪಸು ಬರುತ್ತಾರೆ. ಒಂದೇ ಸಲ ಎಲ್ಲರನ್ನೂ ಕರೆದು ಕೊಂಡು ಬರಲು ಸಾಧ್ಯ ಎಂದು ಅನಿಸುವುದಿಲ್ಲ. ಬಿಜೆಪಿಯಲ್ಲಿದ್ದುಕೊಂಡೆ ನನಗೆ ಸಹಾಯ ಮಾಡಬಹುದು. ಕೆಲವರು ಅವರ ರಾಜಕೀಯ ಭವಿಷ್ಯ ನೋಡಿಕೊಳ್ಳಬಹುದು. ಯಾರಿಗೂ ಒತ್ತಡ ಹಾಕಿ ಬನ್ನಿ ಎಂದು ಹೇಳುವುದು ಸರಿಯಾಗುವುದಿಲ್ಲ. ಎರಡು ಜಿಲ್ಲೆಯಲ್ಲಿ ಅನೇಕ ಮಂದಿ ನನ್ನ ಜೊತೆ ಬರುತ್ತೇನೆ ಎಂದಿದ್ದಾರೆ. ಅವರಿಂದ ನನ್ನ ರಾಜಕೀಯ ಭವಿಷ್ಯ ನನ್ನಿಂದ ಅವರ ರಾಜಕೀಯ ಭವಿಷ್ಯ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದರು.

Latest Indian news

Popular Stories