ಕುಂದಾಪುರ: ಉಪ್ಪುಂದದಲ್ಲಿ ಮತ್ತೊಂದು ದೋಣಿ ಮುಳುಗಡೆ, 9 ಮಂದಿ ಮೀನುಗಾರರ ರಕ್ಷಣೆ

ಕುಂದಾಪುರ, ಆ.5: ಕೊಡೇರಿ ಸಮುದ್ರ ತೀರದಲ್ಲಿ ಶುಕ್ರವಾರ ಆಗಸ್ಟ್ 5ರಂದು ಮತ್ತೊಂದು ದೋಣಿ ಅವಘಡ ಸಂಭವಿಸಿದೆ.

ಭಾರಿ ಅಲೆಗಳಿಗೆ ಸಿಲುಕಿದ ದೋಣಿ ಮಗುಚಿ ಬಿದ್ದಿದೆ. ಅದೃಷ್ಟವಶಾತ್, ಅದರಲ್ಲಿದ್ದ ಎಲ್ಲಾ ಒಂಬತ್ತು ಮೀನುಗಾರರನ್ನು ಇತರ ದೋಣಿಗಳಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ. 1.5 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ದೋಣಿಯಿಂದ ಸುಮಾರು 10 ಮೀಟರ್ ದೂರದಲ್ಲಿ ಮೀನುಗಾರರಲ್ಲಿ ಒಬ್ಬರಾದ ಕುಪ್ಪಯ್ಯ ಬಲೆಯಲ್ಲಿ ಸಿಲುಕಿದ್ದರು. ಬಹಳ ಕಷ್ಟಪಟ್ಟು ಅವನನ್ನು ಹೊರಗೆ ತರಲಾಯಿತು.

ಪಲ್ಟಿಯಾದ ಶ್ರೀ ದುರ್ಗಾಪರಮೇಶ್ವರಿ ದೋಣಿಯ ಸಮೀಪ ಮೀನುಗಾರಿಕೆ ನಡೆಸುತ್ತಿದ್ದ ಆರು ದೋಣಿಗಳು ಕಾರ್ಯಪ್ರವೃತ್ತರಾಗಿ ಎಲ್ಲಾ ಮೀನುಗಾರರನ್ನು ರಕ್ಷಿಸಿದವು. ಜತೆಗೆ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದ ದೋಣಿಯನ್ನು ಹಗ್ಗಗಳಿಂದ ಎಳೆದು ಸುರಕ್ಷಿತವಾಗಿ ಮರವಂತೆ ಮೀನುಗಾರಿಕಾ ಬಂದರಿಗೆ ತಂದರು.

ಜುಲೈ 31ರಂದು ಬೃಹತ್ ಅಲೆಗಳ ರಭಸಕ್ಕೆ ದೋಣಿ ಮಗುಚಿ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.

Latest Indian news

Popular Stories