ಕೊಲ್ಲೂರು ಬೈಂದೂರು ಮಾರ್ಗ ಸರಕಾರಿ ಬಸ್ಸು ಸಂಚಾರ ಸ್ಥಗಿತ:ಸ್ಥಳೀಯರ ಆಕ್ರೋಶ

ಬೈಂದೂರು:ತಾಲೂಕಿನ ಗ್ರಾಮೀಣ ಪ್ರದೇಶದ ಕೊಲ್ಲೂರಿನ ಜನರ ಅನುಕೂಲಕ್ಕಾಗಿ ಕೊಲ್ಲೂರು ಮಾರ್ಗದ ಹಾಲ್ಕಲ್,ಎಲ್ಲೂರು, ಅರೆ ಶಿರೂರು,ಗೋಳಿಹೊಳೆ,ಎಳಜಿತ್, ತಗ್ಗರ್ಸೆ ಬೈಂದೂರು ಮಾರ್ಗಕ್ಕೆ ಸರಕಾರಿ ಬಸ್ಸು ಆರಂಭಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ,ಬೈಂದೂರು – ಕೊಲ್ಲೂರು ಕಟ್ಟಡ ಕಾರ್ಮಿಕರ ಸಂಘಟನೆಗಳು ಸಾರ್ವಜನಿಕರೊಂದಿಗೆ ಹೋರಾಟ ನಡೆಸಿತ್ತು. ಇದರ ಪರಿಣಾಮವಾಗಿ ಸಾರಿಗೆ ಪ್ರಾಧಿಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಮಾರ್ಚ್ 12 ರಿಂದ ಮಾರ್ಚ್ 29 ವರೆಗೆ 17 ದಿನಗಳು ಕೊಲ್ಲೂರು ಜನರಿಗೆ ವಿದ್ಯಾರ್ಥಿಗಳಿಗೆ ಸೇವೆ ಒದಗಿಸಿ ಈಗ ದಿಢೀರನೆ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಇಂದು ಸ್ಥಳೀಯರು ಸರಕಾರಿ ಡಿಪೋ ವ್ಯವಸ್ಥಾಪಕರನ್ನು ಭೇಟಿ ಮಾಡಿ ಪುನರ್ ಆರಂಭಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ಮನವಿ ನೀಡಿದರು.

ಈ ಮಾರ್ಗದಲ್ಲಿ ಸರಕಾರಿ ಬಸ್ಸು ಸಂಚರಿಸುವಾಗ ಕೆಲವು ವ್ಯಕ್ತಿಗಳು ಬಸ್ಸಿನ ಸಿಬ್ಬಂದಿಗಳಿಗೆ ಬೆದರಿಕೆ ಹಾಕುವುದು, ಸಾರ್ವಜನಿಕರನ್ನು ಬಸ್ಸಿನಿಂದ ಇಳಿಸುವುದು ಮುಂತಾದ ಪ್ರಕರಣಗಳು ನಡೆದಿದ್ದು ಈ ಸಂಬಂಧ ಸದ್ರಿ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಸಂದೇಹವಿದೆ.ಈ ಸಂಬಂಧ ಡಿಪೋದ ವ್ಯವಸ್ಥಾಪಕರನ್ನು ಸಂಘಟನೆಯವರು ಕೇಳಿದಾಗ ತಾಲೂಕು – ನಿರ್ವಾಹಕರ ಕೊರತೆಯಿದೆ ಎಂದು ಸಮಜಾಯಿಷಿ ನೀಡುತ್ತಿರುವುದು ಸರಿಯಲ್ಲ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ಯಾರೂ ಈ ರೀತಿ ಸಾರ್ವಜನಿಕ ಸೇವೆಗೆ ಅಡ್ಡಿ ಪಡಿಸುತ್ತಾರೋ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಕೂಡಲೇ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಂಗಳೂರು ನಿಯಂತ್ರಣಾಧಿಕಾರಿಗಳು ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮವಹಿಸಿ ಶೀಘ್ರ ಬೈಂದೂರು ರೈಲ್ವೇ ಸ್ಟೇಷನ್ ನಿಂದ ಕೊಲ್ಲೂರಿಗೆ ಈ ಮೊದಲಿನಂತೆ ಸರಕಾರಿ ಬಸ್ಸು ಸಂಚಾರ ಆರಂಭಿಸಲು ಸೂಚಿಸಬೇಕು ಎಂದು ಆಗ್ರಹಿಸಿದೆ. ಇಲ್ಲವಾದಲ್ಲಿ ಜನಪರ ಸಂಘಟನೆಗಳೊಂದಿಗೆ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ವೇಳೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ ಪಡುಕೋಣೆ,ಕಟ್ಟಡ ಕಾರ್ಮಿಕರ ಸಂಘಟನೆಯ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ನರಸಿಂಹ ಆಚಾರ್ ಕೊಲ್ಲೂರು,ರಾಘವೇಂದ್ರ ಅರೆ ಶಿರೂರು, ಸಚಿನ್, ನಾಗರತ್ನ ನಾಡ, ನಾಗರತ್ನ ಪಡುವರಿ, ಉದಯ ಮಡಿವಾಳ
ಅರೆಶಿರೂರು, ಸಂದೀಪ್ ಮರಾಠಿ ಅರೆಶಿರೂರು,ಸಿಐಟಿಯು ಮುಖಂಡರಾದ ಸುರೇಶ್ ಕಲ್ಲಾಗರ, ಎಚ್ ನರಸಿಂಹ, ಚಂದ್ರಶೇಖರ ಇದ್ದರು.

Latest Indian news

Popular Stories