ಸಾಂದರ್ಭಿಕ ಚಿತ್ರ
ಮಲ್ಪೆ : ಮೀನುಗಾರಿಕೆ ಮುಗಿಸಿ ವಾಪಸು ಬರುತ್ತಿರುವ ಆಳಸಮುದ್ರ ಬೋಟನ್ನು ತಡೆದು ನಿಲ್ಲಿಸಿ ಬೋಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನು, ಡೀಸೆಲ್ ಸಹಿತ 7 ಮಂದಿ ಮೀನುಗಾರರನ್ನು 25 ಜನರ ತಂಡ ಅಪಹರಿಸಿದ ಘಟನೆ ಭಟ್ಕಳದ ಮಾವಿನ ಕುರ್ವೆ ಬಂದರಿನಲ್ಲಿ ನಡೆದಿದೆ.
ಮಲ್ಪೆಯ ಚೇತನ್ ಸಾಲ್ಯಾನ್ ಅವರಿಗೆ ಸೇರಿದ ಕೃಷ್ಣನಂದನ ಆಳಸಮುದ್ರ ಬೋಟಿನಲ್ಲಿ ಈ ಘಟನೆ ನಡೆದಿದ್ದು ಅದರಲ್ಲಿ ಮೀನುಗಾರಿಕೆಗೆ ತೆರಳಿದ್ದ ನಾಗರಾಜ್ ಹರಿಕಾಂತ್, ನಾಗರಾಜ್ ಎಚ್., ಅರುಣ್ ಹರಿಕಾಂತ ಅಂಕೋಲ, ಅಶೋಕ ಕುಮಟಾ, ಕಾರ್ತಿಕ ಹರಿಕಾಂತ ಮಂಕಿ, ಚಂದ್ರಕಾಂತ ಹರಿಕಾಂತ ಉಪ್ಪುಂದ, ಸುಬ್ರಹ್ಮಣ್ಯ ಖಾರ್ವಿ ಅವರನ್ನು ಬಂಧನದಲ್ಲಿರಿಸಲಾಗಿದೆ.
ಫೆ. 26ರ ತಡರಾತ್ರಿ ಮೀನುಗಾರಿಕೆ ಮುಗಿಸಿ ಮಲ್ಪೆ ಬಂದರು ಕಡೆ ಬರುತ್ತಿರುವಾಗ ಭಟ್ಕಳ ಸಮೀಪ ಬೋಟಿನ ಬಲೆ ಫ್ಯಾನಿಗೆ ಬಿದ್ದು ಎಂಜಿನ್ ಸ್ಥಗಿತಗೊಂಡು ಬೋಟು ನಿಂತಿತ್ತು, ಈ ಸಮಯದಲ್ಲಿ ಸುಮಾರು 25 ಮಂದಿ ಒಮ್ಮಿಂದೊಮ್ಮೆಲೆ ಬಂದು ಅಕ್ರಮಣಗೈದು ಬೋಟನ್ನು ತೀರ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ. ಬೋಟಿನಲ್ಲಿದ್ದ ಸುಮಾರು 8 ಲಕ್ಷ ರೂ. ಮೌಲ್ಯದ ಮೀನು, 7,500 ಲೀ ಡೀಸೆಲ್ ಅನ್ನು ದೋಚಿದ್ದಲ್ಲದೆ ಬೋಟಿನಲ್ಲಿದ್ದ 7 ಮಂದಿ ಮೀನುಗಾರರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಬೋಟಿನ ಮೀನುಗಾರರ ಮೊಬೈಲಿಗೆ ಕರೆ ಮಾಡಿದಾಗ ಸ್ವಿಚ್‌ಆಫ್ ಅಗಿದ್ದು ಅಪಹರಣಕಾರರು ಮೀನುಗಾರರನ್ನು ಬಂಧನದಲ್ಲಿರಿಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.