ನೇಜಾರು ಕೊಲೆ ಪ್ರಕರಣ: ಅಕ್ಕ-ತಂಗಿಯನ್ನು ಕೊಲ್ಲಲು ಯೋಚಿಸಿದ್ದ ಆರೋಪಿ | ನವೆಂಬರ್ 11 ರಂದು ಮುರುಡೇಶ್ವರಕ್ಕೆ ಹೋಗುವಾಗ ಸ್ಥಳ ಗುರುತಿಸಿದ್ದ ಕಿರಾತಕ!

ಉಡುಪಿ, ಫೆ.13: ನೇಜಾರು ಕೊಲೆ ಪ್ರಕರಣದ ಆರೋಪ ಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ‌‌. ನವೆಂಬರ್ 12 ರಂದು ನಾಲ್ವರನ್ನು ಅಮಾನುಷವಾಗಿ ಕೊಂದ ಆರೋಪಿ ಪ್ರವೀಣ್ ಚೌಗಲೆ ಇದೀಗ ಪರಪ್ಪನ ಅಗ್ರಾಹಾರ ಜೈಲಿನಲ್ಲಿದ್ದಾನೆ.

ಕೊಲೆಯಾದ ಐನಾಝ್ ಮತ್ತು ತನ್ನ ನಡುವಿನ ಸ್ನೇಹದ ಕುರಿತು ಪ್ರವೀಣ್ ಚೌಗುಲೆ, ಆಕೆಯ ಅಕ್ಕ ಅಫ್ನಾನ್ಗೂ ತಿಳಿಸಿದ್ದನು. ಆದುದರಿಂದ ಐನಾಝ್ ಒಬ್ಬಳನ್ನು ಕೊಲೆ ಮಾಡಿದರೆ ಅಫ್ನಾನ್ ಪೊಲೀಸರಿಗೆ ತನ್ನ ಬಗ್ಗೆ ಮಾಹಿತಿ ಹೇಳ ಬಹುದು ಎಂದು ಯೋಚಿಸಿದ್ದ ಚೌಗುಲೆ, ಇಬ್ಬರನ್ನು ಕೊಲೆ ಮಾಡಲು ಯೋಚಿಸಿದ್ದ ಎಂಬ ವಿಚಾರ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಕೊಲೆಗೆ ಪ್ರಮುಖ ಕಾರಣ:

2023ರ ಫ್ರೆಬವರಿ ತಿಂಗಳಲ್ಲಿ ಪ್ರವೀಣ್ ಅರುಣ್ ಚೌಗುಲೆಗೆ ಐನಾಝ್ ಪರಿಚಯವಾಗಿದ್ದು, ಮುಂದಿನ ದಿನಗಳಲ್ಲಿ ಪರಸ್ಪರ ಸ್ನೇಹ ಇತ್ತು. ಇವರಿಬ್ಬರ ನಡುವಿನ ಸ್ನೇಹ ಚೌಗುಲೆ ಪತ್ನಿಗೆ ತಿಳಿದು ಆಕೆ ಜಗಳ ಮಾಡುತ್ತಿದ್ದಳು. ಈ ವಿಚಾರವನ್ನು ಚೌಗುಲೆ, ಐನಾಝ್ ಬಳಿ ಹೇಳಿದಾಗ ಆಕೆ ತಮ್ಮ ನಡುವಿನ ಸ್ನೇಹ ನಿಲ್ಲಿಸುವಂತೆ ತಾಕೀತು ಮಾಡಿದ್ದಳು.

ಅಲ್ಲದೆ ಆಕೆ ಕತಾರ್ನಲ್ಲಿರುವ ತನ್ನ ಪ್ರಿಯಕರ ಜೊತೆ ಮದುವೆಯಾಗುವು ದಾಗಿ ಚೌಗುಲೆಗೆ ತಿಳಿಸಿದ್ದಳು. ಈ ಮಧ್ಯೆ ಆಕೆ ಚೌಗುಲೆಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಳು. ಇದೇ ಕಾರಣಕ್ಕೆ ಆಕೆಯನ್ನು ಅತೀಯಾಗಿ ಹಚ್ಚಿಕೊಂಡಿದ್ದ ಚೌಗುಲೆ, ಆಕೆಯ ಕೊಲೆಗೆ ಯೋಚಿಸಿದ್ದ ಎಂದು ಪೊಲೀಸ್ ತನಿಖೆಯಲ್ಲಿ ಕಂಡುಬಂದಿರುವುದಾಗಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಕೋಡಿಕಲ್ ಬದಲು ನೇಜಾರಿನಲ್ಲಿ ಕೊಲೆ:

ಐನಾಝ್ ವಾಸವಾಗಿದ್ದ ಮಂಗಳೂರು ಕೋಡಿಕಲ್ ಬಾಡಿಗೆ ಮನೆಗೆ ಚೌಗುಲೆ ಕೂಡ ಬರುತ್ತಿದ್ದನು. ಇದರಿಂದ ಚೌಗುಲೆಯನ್ನು ಅಲ್ಲಿನ ಮನೆಯ ಮಾಲಕ ನೋಡಿದ್ದರು ಮತ್ತು ಪರಿಚಯ ಕೂಡ ಇತ್ತು. ಇದೇ ಕಾರಣಕ್ಕೆ ಆತ ಐನಾಝ್ಳನ್ನು ಕೋಡಿಕಲ್ ಮನೆಯ ಬದಲು ಆಕೆಯ ಉಡುಪಿ ನೇಜಾರಿನ ಮನೆಯಲ್ಲಿಯೇ ಕೊಲೆ ಮಾಡಲು ತೀರ್ಮಾನಿಸಿದ್ದನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ನ.12ರಂದು ಚೌಗುಲೆ, ತನ್ನ ಮೊಬೈಲ್ನ ಸ್ಲ್ಯಾಪ್ಚಾಟ್ಗೆ ಶೇರ್ ಮಾಡಿದ್ದ ಐನಾಝ್ಳ ಮನೆಯ ಲೊಕೇಶನ್ ಮೂಲಕ ಆಕೆಯ ಮನೆಯ ದಾರಿಯನ್ನು ತಿಳಿದುಕೊಂಡಿದ್ದನು. ಕೃತ್ಯದ ವೇಳೆ ಮೊಬೈಲ್ ತೆಗೆದುಕೊಂಡು ಹೋದರೆ ಪೊಲೀಸರಿಗೆ ಸಿಕ್ಕಿ ಬೀಳಬಹುದು ಎಂಬ ಕಾರಣದಿಂದ ಆತ ತನ್ನ ಮೊಬೈಲ್ನ್ನು ಫ್ಲೈಟ್ ಮೋಡ್ಗೆ ಹಾಕಿ ಮನೆಯಲ್ಲಿಯೇ ಇಟ್ಟು ಹೋಗಿದ್ದನು ಎಂಬುದು ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ.

ಕೊಲೆಗೆ ಮುಂಚಿನ ದಿನ ಸಂತೆಕಟ್ಟೆ ಜಂಕ್ಷನ್ ಗುರುತಿಸಿದ ಆರೋಪಿ:

ಕೊಲೆಗೆ ಮುಂಚಿನ ದಿನ ನ.11ರಂದು ಐನಾಝ್ ಮನೆಗೆ ಹೋಗುವ ಸಂತೆಕಟ್ಟೆ ಕ್ರಾಸ್ ಮತ್ತು ರಸ್ತೆ ತಿಳಿದುಕೊಂಡು ಬರುವ ಉದ್ದೇಶದಿಂದ ಚೌಗುಲೆ ತನ್ನ ಪತ್ನಿ ಮತ್ತು ಮಕ್ಕಳನ್ನು ಉಡುಪಿ ರಸ್ತೆಯಾಗಿ ಮುರ್ಡೇಶ್ವರ ದೇವಸ್ಥಾನಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದನು. ದಾರಿ ಮಧ್ಯೆ ಹೋಗುವಾಗ ಮತ್ತು ಬರುವಾಗ ಸಂತೆಕಟ್ಟೆ ಜಂಕ್ಷನ್ ಬಗ್ಗೆ ಆತನ ತಿಳಿದುಕೊಂಡಿದ್ದನು ಎಂಬುದಾಗಿ ಚೌಗುಲೆ ನೀಡಿದ ಹೇಳಿಕೆಯನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಕೊಲೆ ಮಾಡುವ ಉದ್ದೇಶದಿಂದ ಚೌಗುಲೆ ನೇಜಾರು ತೃಪ್ತಿ ಲೇಔಟ್ ನಲ್ಲಿರುವ ಐನಾಝ್ ಮನೆಗೆ ಹೋಗಿದ್ದು, ಅಲ್ಲಿ ಆಕೆಯ ಅಮ್ಮ ಬಾಗಿಲು ತೆಗೆದು ಹಾಲ್ನಲ್ಲಿ ಕೂರುವಂತೆ ಚೌಗುಲೆಗೆ ತಿಳಿಸಿದ್ದರು. ಬೆಡ್ರೂಂನಿಂದ ಐನಾಝ್ ಬಂದು ಚೌಗುಲೆಯನ್ನು ನೋಡಿ, ‘ನೀನು ಯಾಕೆ ಇಲ್ಲಿಗೆ ಬಂದೆ’ ಎಂದು ಹೇಳಿದ್ದಳು.

ಅದಕ್ಕೆ ಆತ ‘ನನಗೆ ನಿನ್ನ ಜೊತೆ ಎರಡು ನಿಮಿಷ ಮಾತನಾಡಲು ಇದೆ’ ಎಂದು ತಿಳಿಸಿದನು. ಬಳಿಕ ಆಕೆಯ ಹತ್ತಿರ ಹೋದ ಚೌಗುಲೆಯನ್ನು ಐನಾಝ್, ಮನೆಯಿಂದ ಹೊರ ಹೋಗುವಂತೆ ತಳ್ಳಿದಳು. ಆಗ ಆತ ತನ್ನ ಬ್ಯಾಗ್ನಲ್ಲಿದ್ದ ಚಾಕು ತೆಗೆದು ಐನಾಝ್ ಸೇರಿದಂತೆ ನಾಲ್ವರನ್ನು ಕೊಲೆ ಮಾಡಿದನು ಎಂದು ಪೊಲೀಸ್ ತನಿಖೆಯಿಂದ ಕಂಡುಬಂದಿದೆ.

ಮುಸ್ಲಿಮ್ ಯುವತಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದ ಚೌಗಲೆ:

ಪ್ರವೀಣ್ ಚೌಗುಲೆಯ ಸಾಂಗ್ಲಿಯ ಮನೆಗೆ ಆತನ ತಂದೆಯ ಪರಿಚಯದ ಇದೀಶ್ ಸೌದಾಗರ್ ಎಂಬವರ ಮಗಳು ರಿಯಾ ಬರುತ್ತಿದ್ದಳು. ಈ ವೇಳೆ ಇವರಿಬ್ಬರ ಮಧ್ಯೆ ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ಬೇರೆ ಧರ್ಮಕ್ಕೆ ಸೇರಿದ್ದರಿಂದ ಇಬ್ಬರ ಮನೆಯಲ್ಲೂ ಮದುವೆಗೆ ಒಪ್ಪಿರಲಿಲ್ಲ.
ಅದಕ್ಕಾಗಿ ಚೌಗುಲೆ, ರಿಯಾಳನ್ನು 2009ರ ಜುಲೈ ತಿಂಗಳಲ್ಲಿ ಮಂಗಳೂರಿಗೆ ಕರೆದುಕೊಂಡು ಬಂದು ಕದ್ರಿ ದೇವಸ್ಥಾನದಲ್ಲಿ ಹಿಂದೂ ಧರ್ಮದಂತೆ ಮದುವೆ ಯಾಗಿದ್ದನು. ನಂತರ ಆತ ತನ್ನ ಪತ್ನಿಯ ಹೆಸರನ್ನು ಪ್ರಿಯಾ ಎಂಬುದಾಗಿ ಬದಲಾಯಿಸಿದ್ದನು ಎಂಬುದಾಗಿ ತನ್ನ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣ:

ಆರೋಪಿ ವಿರುದ್ಧದ ಪ್ರಕರಣಗಳು
ಆರೋಪಿ ವಿರುದ್ಧ ಚಾರ್ಜ್ಶೀಟ್ನಲ್ಲಿ ಐಪಿಸಿ 449(ಮರಣದಂಡನೆ ಶಿಕ್ಷೆಯಾಗುವ ಅಪರಾಧವನ್ನು ಮಾಡಲು ಮನೆಗೆ ಅತ್ರಿಕ್ರಮಣ) 302(ಕೊಲೆ), 307(ಕೊಲೆಯತ್ನ), 324(ಅಪಾಯಕಾರಿ ಆಯುಧಗಳಿಂದ ಸ್ವಯಂಪ್ರೇರಣೆ ಯಿಂದ ಗಾಯ ಉಂಟು ಮಾಡಿರುವುದು), 201(ಸಾಕ್ಷ್ಯನಾಶ) ಪ್ರಕರಣಗಳನ್ನು ದಾಖಲಿಸಿರುವುದಾಗಿ ಉಲ್ಲೇಖಿಸಲಾಗಿದೆ.

ಬಾಕಿ ಇರುವ ಎಫ್ಎಸ್ಎಲ್ ವರದಿಗಳು!
ಈ ಪ್ರಕರಣದಲ್ಲಿ ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿರುವ ಘಟನಾ ಸ್ಥಳದಲ್ಲಿ ಸಂಗ್ರಹಿಸಿದ ಸ್ವ್ಯಾಬ್, ಕೂದಲು, ಮೃತರ ಬಟ್ಟೆಗಳು, ಬಂಧನ ವೇಳೆ ಆರೋಪಿ ಮೈಮೇಲಿದ್ದ ಬಟ್ಟೆಗಳು, ಆರೋಪಿಯ ಕಾರಿನಲ್ಲಿ ಸಂಗ್ರಹಿಸಲಾದ ಸ್ವ್ಯಾಬ್, ತನಿಖೆಯಲ್ಲಿ ಜಪ್ತಿ ಮಾಡಿರುವ ಆರೋಪಿಯ ಚಪ್ಪುಲಿ, ಒಳಚಡ್ಡಿ, ಕೃತ್ಯಕ್ಕೆ ಬಳಸಿದ ಚಾಕುವಿನ ಡಿಎನ್ಎ ವರದಿ ಬೆಂಗಳೂರಿನ ಎಸ್ಎಫ್ಎಸ್ಎಲ್ ನಿಂದ ಬರಲು ಬಾಕಿ ಇದೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.

ಕೃತ್ಯದ ವೇಳೆ ಆರೋಪಿ ಧರಿಸಿದ್ಧ ಶರ್ಟ್, ಪ್ಯಾಂಟ್ ಮತ್ತು ಬನಿಯಾನ್ ಗಳನ್ನು ಸುಟ್ಟು ಹಾಕಿದ್ದು, ಬೂದಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಇದರ ವರದಿ ಇನ್ನಷ್ಟೆ ಬರಬೇಕಾಗಿದೆ. ಪ್ರಕರಣದಲ್ಲಿ ಕೆಲವು ಸಾಕ್ಷಿದಾರರ ಹೇಳಿಕೆ, ಕೆಲವೊಂದು ವರದಿ ಪಡೆಯಲು ಮತ್ತಷ್ಟು ಸಾಕ್ಷ್ಯಗಳನ್ನು ಪಡೆಯುವುದು ಬಾಕಿ ಇದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು ಮುಂದೆ ಸಂಗ್ರಹಿಸುವ ದಾಖಲೆಗಳನ್ನು ಕಲಂ 173(8)ಸಿಆರ್ಪಿಸಿ ಅಡಿಯಲ್ಲಿ ಹೆಚ್ಚಿನ ವರದಿಯೊಂದಿಗೆ ನ್ಯಾಯಾ ಲಯಕ್ಕೆ ಸಲ್ಲಿಸಲಾಗುವುದಾಗಿ ತನಿಖಾಧಿಕಾರಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ‌

2023ರ ನ.12ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನ ತೃಪ್ತಿ ಲೇವೌಟ್ ಮನೆಯಲ್ಲಿ ನಡೆದ ತಾಯಿ ಹಸೀನಾ ಹಾಗೂ ಅವರ ಪುತ್ರಿಯರಾದ ಅಫ್ನಾನ್ ಮತ್ತು ಅಯ್ನಾಝ್ ಹಾಗೂ ಪುತ್ರ ಆಸೀಮ್ ಎಂಬವರ ಕಗ್ಗೊಲೆ ಪ್ರಕರಣದ ಪೊಲೀಸ್ ತನಿಖೆ ಸಂದರ್ಭ ಈ ವಿಚಾರ ಕಂಡುಬಂದಿದ್ದು, ಇದನ್ನು ಶನಿವಾರ ಉಡುಪಿ ನ್ಯಾಯಾಲಯಕ್ಕೆ ಪ್ರಕರಣದ ತನಿಖಾಧಿಕಾರಿಗಳು ಸಲ್ಲಿಸಿರುವ ದೋಷಾರೋಪಣಾ ಪಟ್ಟಿಯಲ್ಲಿ ಈ ವಿಚಾರ ಉಲ್ಲೇಖಗೊಂಡಿದೆ.

Latest Indian news

Popular Stories