ಉಡುಪಿ: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಕಗ್ಗೊಲೆ ಪ್ರಕರಣದ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾ ಲಯವು ಮುಂದಿನ ವಿಚಾರಣೆಯನ್ನು ಆರಂಭಿಸಲು ಪ್ರಕರಣವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಫೆ.15ರಂದು ಒಪ್ಪಿಸಿತು.
ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿಯ ಪರಿಶೀಲನೆ ಪೂರ್ಣಗೊಂಡ ಬಳಿಕ ಆರೋಪಿ ವಕೀಲರಿಗೆ 15 ಸಂಪುಟಗಳ 2202 ಪುಟಗಳ ದೋಷಾ ರೋಪಣಾ ಪಟ್ಟಿಯನ್ನು ನೀಡಲಾಯಿತು. ಈ ವೇಳೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಹಾಗೂ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಎಚ್.ಎಂ.ನದಾಫ್ ಹಾಜರಿದ್ದರು.
ಮುಂದೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣಕ್ಕೆ ಸೇಷನ್ಸ್ ಕೇಸು(ಎಸ್‌ಸಿ) ನಂಬರ್ ನೀಡಲಾಗುತ್ತದೆ. ನಂತರ ಆರೋಪಿಯನ್ನು ಮುಂದಿನ ವಿಚಾರಣೆಗೆ ಹಾಜರುಪಡಿಸುವಂತೆ ನ್ಯಾಯಾಲಯ ಕಾರಾಗೃಹಕ್ಕೆ ನೋಟೀಸು ಜಾರಿ ಮಾಡುತ್ತದೆ. ಆದುದರಿಂದ ಆರೋಪಿ ಪ್ರವೀಣ್ ಚೌಗುಲೆನ್ನು ಮುಂದಿನ ವಿಚಾರಣೆ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕೋರ್ಟಗೆ ಹಾಜರು ಪಡಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಆರೋಪಿಗೆ ಚಿಕಿತ್ಸೆ ನೀಡಲು ಆದೇಶ:
ಬೆಂಗಳೂರು ಕಾರಾಗೃಹದಲ್ಲಿರುವ ಆರೋಪಿ ಪ್ರವೀಣ್ ಚೌಗುಲೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ, ತನಗೆ ಕಿಡ್ನಿ ಸ್ಟೋನ್ ಇರುವುದರಿಂದ ಸೂಕ್ತ ಚಿಕಿತ್ಸೆ ನೀಡುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದನು.
ಕಳೆದ ಹಲವು ದಿನಗಳಿಂದ ನನಗೆ ಹೊಟ್ಟೆನೋವು ಆಗುತ್ತಿದೆ. ಆದರೆ ಜೈಲಿನಲ್ಲಿ ನನಗೆ ಕೇವಲ ಪೈನ್‌ಕಿಲ್ಲರ್ ನೀಡಲಾಗುತ್ತದೆ. ಅದು ಬಿಟ್ಟು ಯಾವುದೇ ಚಿಕಿತ್ಸೆ ನೀಡುತ್ತಿಲ್ಲ ಎಂದು ಚೌಗುಲೆ ದೂರಿದನು. ಇದಕ್ಕೆ ನ್ಯಾಯಾಧೀಶೆ ದೀಪಾ, ಆರೋಪಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜೈಲಾಧಿಕಾರಿಗಳಿಗೆ ಆದೇಶ ನೀಡಿದರು.