ಹೊಸ ಕ್ರಿಮಿನಲ್ ಕಾನೂನುಗಳಿಂದ ಪೊಲೀಸರಿಗೆ ಹೆಚ್ಚಿನ ಅಧಿಕಾರ, ಮಾನವ ಹಕ್ಕುಗಳ ನಿರ್ನಾಮ: ನ್ಯಾಯವಾದಿ ಶಾಂತಾರಾಮ್ ಶೆಟ್ಟಿ

ಉಡುಪಿ: ಬ್ರಿಟೀಷರು ತಂದ ಐಪಿಸಿ, ಸಿಆರ್‌ಪಿಸಿ, ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಗಳಲ್ಲಿ ಮಾನವ ಹಕ್ಕುಗಳಿಗೆ ಆದ್ಯತೆ ನೀಡಲಾ ಗಿತ್ತು. ಆದರೆ ಜುಲೈ ಒಂದರ ನಂತರ ಜಾರಿಗೆ ಬರಲಿರುವ ಭಾರತೀಯ ನ್ಯಾಯ ಸಂಹಿತ -2023, ಭಾರತೀಯ ನಾಗರೀಕ ಸುರಕ್ಷಾ ಸಂಹಿತ- 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ವನ್ನು ನೀಡಿ, ಮಾನವ ಹಕ್ಕುಗಳನ್ನು ನಿರ್ನಾಮ ಮಾಡಿದ್ದಾರೆ ಎಂದು ಉಡುಪಿಯ ಹಿರಿಯ ನ್ಯಾಯವಾದಿ ಶಾಂತಾರಾಮ್ ಶೆಟ್ಟಿ ಆರೋಪಿಸಿದರು.

ಉಡುಪಿ ವಕೀಲರ ಸಂಘದ ವತಿಯಿಂದ ಶುಕ್ರವಾರ ವಕೀಲರ ಸಂಘದ ಕಚೇರಿಯಲ್ಲಿ ನಡೆದ ಭಾರತೀಯ ನ್ಯಾಯ ಸಂಹಿತ -2023, ಭಾರತೀಯ ನಾಗರೀಕ ಸುರಕ್ಷಾ ಸಂಹಿತ- 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ -2023 ನೂತನ ಕಾನೂನುಗಳ ಕುರಿತ ವಿಚಾರ ಸಂಕಿರಣದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತಿದ್ದರು.

ಕಾನೂನುಗಳನ್ನು ಕಾಲಕ್ಕೆ ತಕ್ಕಂತೆ ತಿದ್ದುಪಡಿ ಮಾಡು ವುದು ಅಗತ್ಯವಾಗಿದೆ. ಆದರೆ ಇಡೀ ಕಾನೂನುಗಳನ್ನೇ ಬದಲಾವಣೆ ಮಾಡುವುದು ಸರಿಯಲ್ಲ. ಜುಲೈ ಒಂದರ ನಂತರ ಜಾರಿಗೆ ಬರಲಿರುವ ಭಾರತೀಯ ನ್ಯಾಯ ಸಂಹಿತ, ಭಾರತೀಯ ನಾಗರೀಕ ಸುರಕ್ಷಾ ಸಂಹಿತ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳಿಂದ ಜನರಿಗೆ ಅನುಸರಕ್ಷತೆ ಭೀತಿ ಕಾಡುತ್ತಿದೆ. ಈ ಕಾನೂನು ಜಾರಿಗೆ ಬಂದರೆ ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗುತ್ತದೆ ಎಂದು ಅವರು ಹೇಳಿದರು.

ಮೂರು ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬಹುದಾದ ಅಪರಾಧ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ 14 ದಿನಗಳ ಕಾಲಾವಕಾಶವನ್ನು ಹೊಸ ಕಾನೂನುಗಳಲ್ಲಿ ನೀಡಲಾಗಿದೆ. ಇದರಿಂದ ಬಹುತೇಕ ಸಂತ್ರಸ್ತರು ನ್ಯಾಯ ವಂಚಿತರಾಗಲಿದ್ದಾರೆ. ಆ ಮೂಲಕ ಈ ಸಮಾಜವನ್ನು ಮೂವರು ಪಿಪಿಪಿ (ಪೊಲೀಸ್, ಪೊಲಿಟಿಕ್ಸ್, ಪವರ್‌ಫುಲ್ ಮ್ಯಾನ್)ಗಳು ಆಳ್ವಿಕೆ ಮಾಡಲಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಹೊಸ ಕಾನೂನುಗಳನ್ನು ಜಾರಿಗೆ ತರುವಂತೆ ದೇಶದ ಯಾವುದೇ ಮೂಲೆ ಯಿಂದಲೂ ಒತ್ತಾಯಗಳು ಕೇಳಿಬಂದಿಲ್ಲ. ಯಾವುದೇ ಚರ್ಚೆ ಇಲ್ಲದೇ ಇವರೇ ಏಕಾಏಕಿ ಜನರ ಮೇಲೆ ಈ ಕಾನೂನುಗಳನ್ನು ಹೇರಿಕೆ ಮಾಡುತ್ತಿದ್ದಾರೆ. ಕೇವಲ ಹೆಸರಿಗೆ ಮಾತ್ರ ನಾಗರಿಕ ಸುರಕ್ಷಾ ಸಂಹಿತೆಯಾಗಿದೆ. ಆದರೆ ನಿಜವಾಗಿ ಇದು ನಾಗರಿಕ ಅಸುರಕ್ಷಾ ಕಾನೂನುಗಳಾಗಿವೆ ಎಂದು ಅವರು ಟೀಕಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾಲಯದ ನಿರ್ದೇಶಕಿ ನಿರ್ಮಲಾ ಕುಮಾರ್ ಮಾತನಾಡಿ, ಯಾವುದೇ ಹೊಸ ಕಾನೂನುಗಳು ಜಾರಿಗೆ ಬಂದರೂ ಅವುಗಳ ಮಾಹಿತಿ ಯನ್ನು ಜನರಿಗೆ ಹಾಗೂ ಸರಕಾರಕ್ಕೆ ತಿಳಿಸಿಕೊಡುವ ಜವಾಬ್ದಾರಿಯನ್ನು ವಕೀಲರು ತೆಗೆದುಕೊಳ್ಳಬೇಕು. ಕಾನೂನುಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ, ವಾದ ವಿವಾದ ಹಾಗೂ ಸಂವಾದ ಮಾಡಬೇಕು. ಅಂತಹ ಕಾನೂನು ಬೇಕಾ ಬೇಡವೇ ಎಂಬುದನ್ನು ವಕೀಲರು ನಿರ್ಧರಿಸಬೇಕು ಎಂದರು.

ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್. ವಂದಿಸಿದರು. ವಕೀಲೆ ರೂಪಾಶ್ರೀ ಪ್ರಾರ್ಥಿಸಿದರು. ಸಹನಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.

Latest Indian news

Popular Stories